ಕರ್ನಾಟಕಪ್ರಮುಖ ಸುದ್ದಿಮೈಸೂರು

ಎಚ್.ಎಸ್.ಮಹದೇವಪ್ರಸಾದ್ ನಿಧನಕ್ಕೆ ಸಿಎಂ ಕಂಬನಿ: ಇಂದು ಸರ್ಕಾರಿ ರಜೆ ಘೋಷಣೆ

ಹೆಚ್.ಎಸ್.ಮಹದೇವಪ್ರಸಾದ್ ನಿಧನ ವೈಯಕ್ತಿಕವಾಗಿ ನನಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಚ್.ಎಸ್.ಮಹದೇವ ಪ್ರಸಾದ್ ಅವರ ಸಾವು ಆಘಾತ ತಂದಿದೆ ಎಂದರು. ಅವರು ಯಾವುದೇ ಕೆಲಸ ಕೊಟ್ಟರೂ ನಿಷ್ಠೆಯಿಂದ ಮಾಡುತ್ತಿದ್ದರು. ಪಕ್ಷಕ್ಕೂ ಅವರು ನಿಷ್ಠರಾಗಿರುತ್ತಿದ್ದರು. ಒಂದೇ ಒಂದು ಕಪ್ಪು ಚುಕ್ಕೆಯೂ ಅವರ ಜೀವನದಲ್ಲಿ ಇರಲಿಲ್ಲ. ಬಹಳ ಸುಸಂಸ್ಕೃತ ವ್ಯಕ್ತಿ. ಅವರು ಒಂದು ದಿನವೂ ಯಾರಿಗೂ ಬೈದಿದ್ದನ್ನು ನೋಡಿಲ್ಲ. ಐದು ಬಾರಿ ಗುಂಡ್ಲುಪೇಟೆಯಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು ಎಂದರು.

ಅವರದು ಚಿಕ್ಕ ವಯಸ್ಸು, ಸಾಯುವಂಥಹ ವಯಸ್ಸಲ್ಲ. ಅವರಿಗೆ ಒಮ್ಮೆ ಹೃದಯಾಘಾತವಾಗಿತ್ತು. ಬೈಪಾಸ್ ಸರ್ಜರಿಯೂ ಆಗಿತ್ತು. ಅದರ ನಂತರ ತುಂಬಾ ಎಚ್ಚರಿಕೆಯಿಂದ ಇರುತ್ತಿದ್ದರು. ಬೆಳಿಗ್ಗೆ ಬಂದ ಸುದ್ದಿ ನಿಜಕ್ಕೂ ಆಘಾತಕರವಾಗಿದೆ. ಅವರ ಕುಟುಂಬ ಮಾದರಿ ಕುಟುಂಬವಾಗಿದೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಯಲಿದೆ ಎಂದು ತಿಳಿಸಿದರು.

Leave a Reply

comments

Related Articles

error: