ಮೈಸೂರು

ರೈತರಲ್ಲಿ ಅರಿವಿನ ಕೊರತೆಯಿದೆ : ಡಾ.ಮಹದೇವಪ್ಪ ವಿಷಾದ

ರೈತರಲ್ಲಿರುವ ಅರಿವಿನ ಕೊರತೆಯಿಂದ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಧಾರವಾಡ ಕೃಷಿ ವಿದ್ಯಾಲಯದ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಡಾ.ಮಹದೇವಪ್ಪ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯ ಪಕ್ಕ ಇರುವ ರಾಜೇಂದ್ರ ಸಭಾಭವನದಲ್ಲಿ ಮಂಗಳವಾರ ರಾಜ್ಯ ಕಬ್ಬುಬೆಳೆಗಾರರ ಸಂಘದ ವತಿಯಿಂದ ಆಯೋಜಿಸಲಾದ ನೋಟು ಅಪಮೌಲ್ಯ ಹಾಗೂ ರೈತರ ಸ್ಥಿತಿಗತಿಗಳ ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿಯನ್ನು ಡಾ.ಮಹದೇವಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಅರಿವಿನಿ ಕೊರತೆ ಇದೆ. ಅದರಲ್ಲೂ ರೈತರಲ್ಲಿ‌ ಇದು ತುಂಬಾನೇ ಇದೆ. ಅದಕ್ಕಾಗಿ ಅವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ನಾನೂ ಕೂಡ ರೈತನೇ. ನಮ್ಮ ಅಕ್ಕ-ಪಕ್ಕದ ದೇಶಗಳು ಕೃಷಿಯಾಧಾರಿತ ದೇಶವಾಗಿದ್ದು, ಎಷ್ಟು ದೇಶಗಳಿಗೆ ಬೇಕಾದರೂ ಆಹಾರ ಒದಗಿಸಲಿದೆ. ನಾವು ಚೀನಾಗಿಂತ ಕಡಿಮೆ ಪ್ರಮಾಣದ ಬೆಳೆ‌ ಬೆಳೆಯುತ್ತಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕುರುಬೂರಿನ ಮಕ್ಕಳು ಸಾಧನೆ ಮಾಡಿರುವುದು ಸಂತಸ ತಂದಿದೆ. ಯುವಕರಿಂದ ಮಾತ್ರ ದೇಶ ಉಳಿಸಲು ಸಾಧ್ಯ. ಕೃಷಿ ಮಾಡುವಲ್ಲಿ ಯುವಕರು  ಮುಂದೆ‌ ಬರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ‌ ನಾವು ಓಡಬೇಕು. ಇಲ್ಲವಾದರೆ ಪ್ರಗತಿ ಕಷ್ಟಸಾಧ್ಯ ಎಂದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಸಕ್ಕರೆ ಸಚಿವ ಮಹದೇವ ಪ್ರಸಾದ್ ಅವರ ನಿಧನಕ್ಕೆ ಕಂಬನಿ ಮಿಡಿದರು. ಬಳಿಕ ಮಾತನಾಡಿದ ಅವರು ಮಹದೇವ ಪ್ರಸಾದ್ ನನ್ನ ಆತ್ಮೀಯ ಸ್ನೇಹಿತ. ಅವರ ಅಕಾಲಿಕ ಮರಣ ನನಗೆ ನೋವುಂಟು ಮಾಡಿದೆ. ರಾಜಕೀಯಕ್ಕೆ‌ ಬಂದ ಮೇಲೆ ಅವರು ನಾನೂ ಶತ್ರುಗಳ ರೀತಿ ಆದೆವು. ಕಾರಣ ಅವರು ರಾಜಕೀಯ ಪರವಾದರು. ನಾನೂ ರೈತರ ಪರವಾದೆ. ಇದರಿಂದ ಹೋರಾಟದ ಮೂಲಕ ನಾನೂ ಅವರಿಗೆ ಶತ್ರುವಾದೆ. ಅವರ ಕುಟುಂಬಕ್ಕೆ ಈ ಕಾರ್ಯಕ್ರಮದ ಮೂಲಕ ಸಾಂತ್ವನ ಹೇಳುತ್ತೇನೆ ಎಂದರು. ನೋಟು ಅಪಮೌಲ್ಯದ ಕುರಿತು ಮಾತನಾಡಿದ ಅವರು ಮೋದಿ ಅವರ ನಿರ್ಧಾರ ಒಳ್ಳೆಯದ್ದೇ ಎಂದರು.  ಕುರುಬೂರಿನ ಮಕ್ಕಳು ಎಲ್ಲಿ ಹೋದರೂ ಖೋ ಖೋ‌ ಪಂದ್ಯಾವಳಿಯಲ್ಲಿ ಗೆದ್ದು, ನಮ್ಮ ಊರಿಗೆ ಕೀರ್ತಿ ತರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ರೈತಧ್ವನಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಖೋ, ಖೋ ಪಂದ್ಯಾವಳಿಯಲ್ಲಿ ವಿಜೇತ ಪಂದ್ಯಾಳುಗಳನ್ನು ಸನ್ಮಾನಿಸಲಾಯಿತು.

Leave a Reply

comments

Related Articles

error: