ಕರ್ನಾಟಕಪ್ರಮುಖ ಸುದ್ದಿ

ಮಾನವ ಉದ್ಯೋಗ ದಿನ ಸೃಜನೆಗೆ ಒತ್ತು ನೀಡಲು ಜಿ.ಪಂ ಸಿಇಒ ಸಲಹೆ

ಮಂಡ್ಯ (ನ.16): ಉದ್ಯೋಗ ಸೃಷ್ಟಿ, ಸಂಪತ್ತು ಸೃಷ್ಟಿ ಮತ್ತು ಗ್ರಾಮೀಣ ಬದುಕಿಗೆ ಆರ್ಥಿಕ ಚೈತನ್ಯ ಒದಗಿಸುವ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಣಾಧಿಕಾರಿಗಳಾದ ಕೆ.ಯಾಲಕ್ಕಿಗೌಡ ಸಲಹೆ ನೀಡಿದರು.

ಅವರು ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಟಾನ ಇಲಾಖೆಗಳ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಸ್ಥಳೀಯ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು ಹಾಗೂ ನಿರಂತರ ಉಪಯೋಗವೆನಿಸಬಹುದಾದ ಆಸ್ತಿಗಳನ್ನು ಸೃಜಿಸುವ ಮೂಲಕ ಜೀವನೋಪಾಯ ಮಾರ್ಗಗಳನ್ನು ಬಲಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇಂತಹ ಬಹುಪಯೋಗಿ ಯೋಜನೆಯನ್ನು ಸಮರ್ಥನೀಯವಾಗಿ ಅನುಷ್ಟಾನಗೊಳಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಅನುಷ್ಟಾನ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.

ಕೆರೆ, ಕಟ್ಟೆ, ಕೊಳ, ಚೆಕ್ ಡ್ಯಾಂಗಳ ರಿಪೇರಿ, ನವೀಕರಣ, ಮರುಪೂರಣ, ಬಂಜರು ಅಥವಾ ಬೀಳು ಬಿದ್ದ ಭೂಮಿ ಅಭಿವೃದ್ಧಿ, ಕಾಲುವೆಗಳ ನಿರ್ಮಾಣ,ಎರೆಹುಳು ಗೊಬ್ಬರ ಘಟಕ ನಿರ್ಮಾಣ, ಭೂ ಅಭಿವೃದ್ಧಿ, ಈರುಳ್ಳಿ ಶೇಖರಣಾ ಘಟಕ, ಕೃಷಿ ಹೊಂಡ ನಿರ್ಮಾಣ, ತೋಟಗಾರಿಕೆ ಮತ್ತು ರೇಷ್ಮೆ ಪ್ಲಾಂಟೇಶನ್, ಇಂಗುಗುಂಡಿಗಳು, ಕಾಡು ಬೆಳಸುವಿಕೆ, ಗಿಡ ನೆಡುವಿಕೆ, ಮೀನುಗಾರಿಕೆ ತೊಟ್ಟಿಗಳ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಯೋಜನೆಯಡಿ ಜಾರಿಗೊಳಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ. ಎಂ.ಕೃಷ್ಣರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾ ಸುಲೋಚನಾ, ಪಿಆರ್‍ಇಡಿ ಇಇ ಪ್ರಕಾಶ್ ಜಿ.ಪವರ್, ಜಿಲ್ಲಾ ತೋಟಗಾರಿಕೆ ನಿರ್ದೇಶಕ ರಾಜು, ರೇಷ್ಮೆ ಇಲಾಖೆ ಜಿಲ್ಲಾ ನಿರ್ದೇಶಕ ಆರ್.ಲೋಕೇಶ್, ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಆಯುಕ್ತಾಲಯದ ಉಪ ನಿರ್ದೇಶಕ ವೆಂಕಟೇಶ್ ಭಾಗವಹಿಸಿದ್ದರು. (ಎನ್.ಬಿ)

Leave a Reply

comments

Related Articles

error: