ಮೈಸೂರು

ಸಮಾನ ಶಿಕ್ಷಣದಿಂದ ಮಾತ್ರ ಸಮಾನತೆ: ರಂಗಾಯಣ ನಿರ್ದೇಶಕ ಜನ್ನಿ ಅಭಿಪ್ರಾಯ

ಶೋಷಿತರ, ಅವಮಾನಿತ ಕೆಳವರ್ಗದ ದಲಿತರ ಸಮಾನ ಶಿಕ್ಷಣ ಹಾಗೂ ಪುನಃಶ್ಚೇತನಕ್ಕಾಗಿ ಸಾವಿತ್ರಿಬಾಯಿ ಫುಲೆಯವರ ಸೇವೆ ಸದಾ ಅಸ್ಮರಣೀಯ. ಕೆಳವರ್ಗದವರು ಸದಾ ಅವರನ್ನು ಸ್ಮರಿಸಬೇಕೆಂದು ರಂಗಾಯಣದ ಮಾಜಿ ನಿರ್ದೇಶಕ ಜನ್ನಿಯವರು ತಿಳಿಸಿದರು.

ಮೈಸೂರಿನ ಇನ್ಸ್’ಟಿಟ್ಯೂಟ್ ಅಫ್ ಇಂಜಿನಿಯರಿಂಗ್‍’ನಲ್ಲಿ ಮಂಗಳವಾರ, ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮದಿನದ ಅಂಗವಾಗಿ ‘ಸಮ ಸಮಾಜದ ನಿರ್ಮಾಣಕ್ಕಾಗಿ ಸಮಾನ ಶಿಕ್ಷಣದ ಅನಿವಾರ್ಯತೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಇಂದಿಗೂ ಶಿಕ್ಷಣದಲ್ಲಿ ಸಮಾನತೆ ಇಲ್ಲ. ಕೆಳವರ್ಗದವರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಅಸಮಾನತೆಯಿಂದಾಗಿ ಸಮಾಜವೂ ಸ್ವಸ್ಥವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಳಹಂತದ ತಳಸಮುದಾಯದ ಸಂಘಟನೆಗಳೇ ಶಾಲೆಗಳನ್ನು ನಡೆಸಬೇಕು. ಓದಿ ವಿದ್ಯಾವಂತರಾದವರು ತಮ್ಮ ಸಮುದಾಯದಕ್ಕೆ ಉತ್ತಮ ಶಿಕ್ಷಣ ಕೊಡಿಸಲು ಶ್ರಮವಹಿಸಬೇಕು. ಜಾತೀಯತೆ ಸಂಪೂರ್ಣ ತೊಲಗಿ, ಬಾಫುಲೆ, ಮಹಾತ್ಮಗಾಂಧಿಜಿ, ಅಂಬೇಡ್ಕರ್‍ರಂಥವರ ಆಶಯದಂತೆ ಮಾನವೀಯತೆ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು ಎಂದು ಆಶಿಸಿದರು.

ಸಾವಿತ್ರಿಬಾಯಿ ಫುಲೆಯವರು ಕುಟುಂಬದ ವಿರೋಧದ ನಡುವೆಯೂ ಶೋಷಿತ ಮಹಿಳೆಯರಿಗೆ ಶಾಲೆಗಳನ್ನು ತೆರೆದು ಪೋಷಕರನ್ನು ಕಾಡಿ-ಬೇಡಿ ಅವರ ಮಕ್ಕಳಿಗೆ ಶಿಕ್ಷಣ ನೀಡಿದರು. ಇಂತಹ ಮಹನೀಯರ ಸೇವೆಯನ್ನು ಸಮಾಜ-ಸಂಘಟನೆಗಳು ಆದರ್ಶವಾಗಿ ಪಡೆಯಬೇಕು. ಆಧುನಿಕತೆ ಹೆಸರಿನಲ್ಲಿ ಜಾತಿವಾದ, ಹಣ-ಅಧಿಕಾರದ ಮೇಲೆ ಸಮಾಜ ನಿಂತಿರುವುದು ಖೇದಕರ. ಇಂತಹ ಪರಿಸ್ಥಿತಿ ಅಳಿಯಬೇಕಾದರೆ ಶೋಷಿತ ಸಮುದಾಯದ ನಾಯಕರು ತಮ್ಮ ತಮ್ಮ ಸಮಾಜದವರಿಗೆ ಶಿಕ್ಷಣ ನೀಡಿ ಮೇಲೆತ್ತಬೇಕು. ಈ ಕಾರ್ಯದಲ್ಲಿ ಸರ್ಕಾರವೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

saviಇದಕ್ಕೂ ಮೊದಲು ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗಿಡಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ದ ರಾಜ್ಯ ಸಂಚಾಲಕ ಮುತ್ತುರಾಜು ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯೂ ಮನು, ಮೆಕಾಲೆ, ಮನಮೋಹನ್‍ಸಿಂಗ್ ಹಾಗೂ ಮೋದಿಜೀಯವರ ಪದ್ಧತಿಯಾಗಿದ್ದು ಸಮಾನತೆ ಮರಿಚೀಕೆಯಾಗಿದೆ ಎಂದು ವ್ಯಂಗ್ಯವಾಡಿದರು.  ಸ್ವಾತಂತ್ರ್ಯಪೂರ್ವದಲ್ಲಿ ಕ್ರೈಸ್ತ ಮಿಷನರಿ ಶಾಲೆಗಳು ಸಮಾನತೆಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದವು. ಅದರಂತೆ ಸಮಾನತೆ ಸಾರುವ ಜೀವನ ಪದ್ಧತಿಯ ಶಿಕ್ಷಣ ಜಾರಿಯಾಗಲಿ ಎಂದು ಆಶಿಸಿದರು.

ದ.ಸಂ.ಸ. ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾರಾಣಿ ಕಾಲೇಜಿನ ಡಾ.ಲತಾ ಮೈಸೂರು, ಮೈಸೂರು ವಿಭಾಗೀಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಎಚ್.ಎಸ್.ಕೃಷ್ಣಪ್ಪ, ಕುಮಾರ್ ಕರಡೀಪುರ, ದೇವಗಳ್ಳಿ ಸೋಮಶೇಖರ್, ಚೋರನಹಳ್ಳಿ ಶಿವಣ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಇಂದು ನಿಧನರಾದ ಸಚಿವ ಹೆಚ್.ಎಸ್.ಮಹದೇವ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

Leave a Reply

comments

Related Articles

error: