ಮೈಸೂರು

ಮೈಸೂರು ಮಹಾನಗರ ಪಾಲಿಕೆಗೆ ಪುಷ್ಪಲತಾ ಜಗನ್ನಾಥ್ ಮೇಯರ್, ಶಫೀ ಅಹ್ಮದ್ ಉಪಮೇಯರ್

ಮೈಸೂರು,ನ.17:-  ಮೈಸೂರು ನಗರಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ 11 ನೇ ವಾರ್ಡಿನಿಂದ ಆಯ್ಕೆಯಾಗಿರುವ ಕಾಂಗ್ರೆಸ್‍ನ ಪುಷ್ಪಲತ ಜಗನ್ನಾಥ್ ನೂತನ ಮೇಯರ್ ಆಗಿ ಹಾಗೂ 31ನೇ ವಾರ್ಡಿನಿಂದ ಆಯ್ಕೆಯಾಗಿರುವ ಜೆಡಿಎಸ್‍ನ ಶಫೀ ಆಹ್ಮದ್ ಉಪಮೇಯರ್ ಆಗಿ ಆಯ್ಕೆಯಾದರು.

ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪ ಮೇಯರ್ ಸ್ಥಾನ ಬಿಸಿಎಗೆ ಮೀಸಲಾಗಿದ್ದು, ಮೈತ್ರಿ ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರಮವಾಗಿ ಮೇಯರ್ ಹಾಗೂ ಉಪಮೇಯರ್ ಸ್ಥಾನ ಅಲಂಕರಿಸಿದವು.

ಬೆಳಿಗ್ಗೆ 7ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಹಾಗೂ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‍ನಿಂದ ಶಫಿ ಅಹ್ಮದ್ ನಾಮಪತ್ರ ಸಲ್ಲಿಸಿದ್ದರು. ಹಾಗೆಯೇ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸುನಂದಾ ಪಾಲನೇತ್ರ ಹಾಗೂ ಉಪಮೇಯರ್ ಸ್ಥಾನಕ್ಕೆ ಸತೀಶ್ ಅವರಿಂದ ನಾಮಪತ್ರ ಸಲ್ಲಿಕೆಯಾದವು.

ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‍ಪಿ 1 ಹಾಗೂ 5 ಪಕ್ಷೇತರ ಸದಸ್ಯರಿದ್ದು, ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಸನ್ನಿವೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಧರ್ಮದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದವು.

ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಶುಕ್ರವಾರ ತಡರಾತ್ರಿ ನಡೆದ ಮಾತುಕತೆಯ ಫಲವಾಗಿ ಐದು ವರ್ಷಗಳ ಅಧಿಕಾರಾವಧಿಯಲ್ಲೇ ಮೇಯರ್ ಗಾದಿಯನ್ನು ಎರಡು ವರ್ಷ ಕಾಂಗ್ರೆಸ್‍ಗೆ ಹಾಗೂ ಮೂರು ವರ್ಷ ಜೆಡಿಎಸ್‍ಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬರಲಾಗಿದೆ. ಈ ಪ್ರಕಾರ, ಮೇಯರ್ ಪಟ್ಟ ಮೊದಲ ವರ್ಷ ಕಾಂಗ್ರೆಸ್‍ಗೆ, ಎರಡನೇ ವರ್ಷ ಜೆಡಿಎಸ್‍ಗೆ, ಮೂರನೇ ವರ್ಷ ಕಾಂಗ್ರೆಸ್‍ಗೆ ಹಾಗೂ ನಂತರದ ನಾಲ್ಕು ಮತ್ತು ಐದನೇ ವರ್ಷ ಜೆಡಿಎಸ್ ಪಾಲಾಗಲಿದೆ.

ಮೇಯರ್ ಸ್ಥಾನಕ್ಕೆ ಪೈಪೋಟಿ

ಕಾಂಗ್ರೆಸ್‍ನಲ್ಲಿ ಮೇಯರ್ ಸ್ಥಾನಕ್ಕೆ ಇಬ್ಬರ ಹೆಸರು ಬಲವಾಗಿ ಕೇಳಿಬಂದಿತ್ತು. ಶಾಂತಕುಮಾರಿ ಹಾಗೂ ಪುಷ್ಪಲತ ಜಗನ್ನಾಥ್ ಇಬ್ಬರೂ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಇವರಿಬ್ಬರಲ್ಲಿ ಯಾರಿಗೆ ಮೇಯರ್ ಪಟ್ಟ ನೀಡಬೇಕೆಂಬ ಹೊಣೆಗಾರಿಕೆಯನ್ನು ಮಾಜಿ ಸಿಎಂ ಹೆಗಲಿಗೆ ಕಟ್ಟಲಾಗಿತ್ತು.  ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಪಾಲಿಕೆ ಸಭಾಂಗಣಕ್ಕೆ ಆಗಮಿಸಿ, ವರಿಷ್ಠರ ಸೂಚನೆಗೆ ಕಾದಿದ್ದರು. ಆದರೆ, ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಮೇಯರ್ ಗಿರಿಗೆ ನಾಮಪತ್ರ ಸಲ್ಲಿಸುವ ಅವಕಾಶ ಪುಷ್ಪಲತ ಜಗನ್ನಾಥ್ ಅವರಿಗೆ ದೊರೆಯಿತು. ಈಗ ನಡೆದಿರುವ ಒಪ್ಪಂದದ ಆಧಾರ ಹಾಗೂ ಸಂಖ್ಯಾ ಬಲದ ಆಧಾರದ ಮೇಲೆ ಪುಷ್ಪಲತ ಜಗನ್ನಾಥ್ ಮೇಯರ್ ಆಗಿ ಹಾಗೂ ಶಫಿ ಅಹ್ಮದ್ ಉಪಮೇಯರ್ ಆಗಿ ಆಯ್ಕೆಗೊಂಡರು. ಉಳಿದಂತೆ ಬಿಜೆಪಿ ಸ್ಪರ್ಧೆ ಹೆಸರಿಗಷ್ಟೇ ಸೀಮಿತವಾಗಿತ್ತು.

ಸ್ವಚ್ಛತೆಗೆ ಆದ್ಯತೆ

ಮೇಯರ್ ಆಗಿ ಆಯ್ಕೆಯಾದ ಪುಷ್ಪಲತ ಜಗನ್ನಾಥ್ ನಾಮಪತ್ರ ಸಲ್ಲಿಸಿದ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಹಠ ಈ ಚುನಾವಣೆಯಲ್ಲಿ ಗೆದ್ದಿದೆ. ಮೈಸೂರಿನಲ್ಲಿ ಕಾಂಗ್ರೆಸ್‍ಗೆ ಅಧಿಕಾರ ಇರಲಿಲ್ಲ. ಮೈತ್ರಿ ಸರ್ಕಾರದಿಂದ ಈಗ ಮೇಯರ್ ಅಧಿಕಾರ ಸಿಕ್ಕಿದೆ. ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ನಾನು ಈ ಹಿಂದೆ ಉಪ ಮೇಯರ್ ಆಗಿ ಕೂಡ ಕೆಲಸ ಮಾಡಿದ್ದೇನೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಎರಡು ಸ್ಥಾಯಿ ಸಮಿತಿಗಳಿಗೆ ನಾಮಪತ್ರ ಸಲ್ಲಿಕೆ

ಇದೇ ವೇಳೆ ಮಹಾನಗರ ಪಾಲಿಕೆಯ ಎರಡು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದ್ದು, ಮೇಯರ್ ಪಟ್ಟವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಈ ಎರಡೂ ಸ್ಥಾಯಿ ಸಮಿತಿಗಳು ಜೆಡಿಎಸ್ ಪಾಲಾದವು. ಜೆಡಿಎಸ್‍ನ ಲಕ್ಷ್ಮಿ ಶಿವಣ್ಣ ನಗರ ಯೋಜನೆಗೆ ನಾಮಪತ್ರ ಸಲ್ಲಿಸಿದರೆ, ರಮಣಿ ಆರೋಗ್ಯ ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ಆಯ್ಕೆಯೂ ನಿರಾತಂಕವಾಗಿ ನಡೆಯಿತು. ಈ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಪಕ್ರಿಯೆ ಸದ್ದಿಲ್ಲದೆ ಮೈತ್ರಿ ಪಕ್ಷಗಳ ಪಾಲಾದಂತಾಗಿದೆ.

ಮೇಯರ್‍ಗೆ 48 ಮತಗಳು

ಮೇಯರ್ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಅವರಿಗೆ 48 ಮತಗಳು ಬಂದವು. ಈ ಹಿನ್ನಲೆಯಲ್ಲಿ 21 ನೇ ಅವಧಿಗೆ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆಯಾದರು. ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಾಗೆ 24 ಮತಗಳು. 22 ಬಿಜೆಪಿ ಸದಸ್ಯರು ಹಾಗೂ ಇಬ್ಬರ ಶಾಸಕರ ಮತ ಸೇರಿ 24 ಮತಗಳು ಬಂದವು.

ಗೆಲುವು ಸಾಧಿಸುತ್ತಿದ್ದಂತೆ ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಕೌನ್ಸಿಲ್ ಸಭಾಂಗಣದಲ್ಲಿ ಎಲ್ಲಾ ಸದಸ್ಯರ ಬಳಿಗೆ ಹೋಗಿ ಕೈ ಮುಗಿದು ಧನ್ಯವಾದ ಅರ್ಪಿಸಿದರು.

ಈ ವೇಳೆ ನೂತನ ಮೇಯರ್ ಹಾಗೂ ಉಪಮೇಯರ್ ಅವರನ್ನು ಶಾಸಕರುಗಳಾದ ಎಲ್.ನಾಗೇಂದ್ರ, ತನ್ವೀರ್ ಸೇಠ್, ಸಚಿವ ಜಿ.ಟಿ.ದೇವೇಗೌಡ,ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮತ್ತಿತರರು ಅಭಿನಂದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: