ಕ್ರೀಡೆ

ವಿಶ್ವ ಮಹಿಳಾ ಬಾಕ್ಸಿಂಗ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೇರಿ ಕೋಮ್, ಮನೀಶಾ ಮೌನ್

ನವದೆಹಲಿ,ನ.19-ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ತಾರಾ ಬಾಕ್ಸರ್ ಮೇರಿ ಕೋಮ್ ಮತ್ತು ಮನೀಶಾ ಮೌನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೇರಿ ಕೋಮ್, ಕಜಕಿಸ್ತಾನದ ಐಗ್ರಿಮ್ ಕೆಸೆನಾಯೆವಾ ವಿರುದ್ಧ 5-0 ಪಾಯಿಂಟ್ಗಳಿಂದ ಗೆಲುವು ಸಾಧಿಸಿದರು. ಒಟ್ಟಾರೆ ಇಬ್ಬರೂ ಬಾಕ್ಸರ್ಗಳು ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಕ್ವಾರ್ಟರ್ನಲ್ಲಿ ಮೇರಿ, ಐರ್ಲೆಂಡ್ ಕಟೀ ಟೇಲರ್ ವಿರುದ್ಧ ಸೆಣಸಲಿದ್ದಾರೆ.

ಮೊದಲ ಬೌಟ್ನಲ್ಲಿ ಬೈ ಪಡೆದು ಪ್ರಿ ಕ್ವಾರ್ಟರ್ ಗೇರಿದ್ದ ಮೇರಿ, ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಉತ್ತಮ ಪಂಚ್ಗಳನ್ನು ಮಾಡಿದ ಮೇರಿ, ಎದುರಾಳಿ ಬಾಕ್ಸರ್ನ್ನು ತಬ್ಬಿಬ್ಬು ಮಾಡಿದರು. ಆರಂಭದಲ್ಲಿ ಅಂಕಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಮೇರಿ, ಎದುರಾಳಿ ಬಾಕ್ಸರ್ಗೆ ಯಾವುದೇ ಅಂಕಗಳಿಸಲು ಅವಕಾಶ ನೀಡದೆ ಪಂದ್ಯ ಗೆದ್ದರು.

ಮೊದಲ ಆವೃತ್ತಿಯಲ್ಲಿ ಮೇರಿ ಬೆಳ್ಳಿ ಪದಕ ಗೆದ್ದಿದ್ದರು. ಬಳಿಕ 2002 ರಿಂದ 2010 ರವರೆಗೆ ಸತತ 5 ಚಿನ್ನದ ಪದಕವನ್ನು ಮೇರಿ ಮುಡಿಗೇರಿಸಿಕೊಂಡಿರುವ ಮೇರಿ ಫೈನಲ್ಗೇರಿ 6ನೇ ಚಿನ್ನ ಜಯಿಸುವ ಉತ್ಸಾಹದಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಮತ್ತೊಂದು ಪ್ರಿ ಕ್ವಾರ್ಟರ್ನಲ್ಲಿ ಮನೀಶಾ ಮೌನ್, ಕಜಕಸ್ತಾನದ ಡಿನಾ ಜೋಲ್ಮನ್ ಎದುರು ಗೆಲುವು ಪಡೆದು ಎಂಟರಘಟ್ಟ ಪ್ರವೇಶಿಸಿದರು. 54 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮನೀಶಾ, ಅವಿರೋಧ ಗೆಲುವು ಪಡೆದರು. ಎದುರಾಳಿ ಬಾಕ್ಸರ್ ಯಾವುದೇ ಪ್ರತಿರೋಧ ಒಡ್ಡದ ಕಾರಣದಿಂದ ಮನೀಶಾ ಸುಲಭ ಗೆಲುವು ಸಾಧಿಸಿದರು.

ಭಾರತದ ಮತ್ತೊಬ್ಬ ಬಾಕ್ಸರ್ ಸರಿತಾ ದೇವಿ 60 ಕೆಜಿ ವಿಭಾಗದ ಪ್ರಿ ಕ್ವಾರ್ಟರ್ ಬೌಟ್ನಲ್ಲಿ 2016 ವಿಶ್ವ ಚಾಂಪಿಯನ್ ಐರ್ಲೆಂಡ್ ಬಾಕ್ಸರ್ ಕೆಲ್ಲಿ ಹ್ಯಾರಿಂಗ್ಟನ್ ವಿರುದ್ಧ 2-3 ರಿಂದ ಪರಾಭವ ಹೊಂದಿದರು. ರೆಫ್ರಿ ತಪ್ಪು ನಿರ್ಣಯ ನೀಡಿದ್ದಾರೆ. ಆದರೂ ನಿರ್ಣಯವನ್ನು ಒಪ್ಪಿಕೊಳ್ಳುತ್ತೇನೆ ಎಂದು ಸರಿತಾ ಹೇಳಿದ್ದಾರೆ.

ಹಿಂದೆ 2014 ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ಸರಿತಾ ರೆಫ್ರಿ ತಪ್ಪು ನಿರ್ಣಯ ನೀಡಿ ನನ್ನನ್ನು ಸೋಲಿಸಿದ್ದಾರೆ ಎಂದು ಕಂಚಿನ ಪದಕ ವಿತರಣೆ ಸಂದರ್ಭದಲ್ಲಿ ಅತ್ತಿದ್ದರು. ಹೀಗಾಗಿ ಸರಿತಾ 1 ವರ್ಷ ನಿಷೇಧಕ್ಕೊಳಗಾಗಿದ್ದರು. ಬಾರಿ ರೆಫ್ರಿ ನಿರ್ಣಯಕ್ಕೆ ಯಾವುದೇ ಪ್ರತಿರೋಧ ತೋರದೆ ನಿರ್ಣಯವನ್ನು ಒಪ್ಪಿಕೊಳ್ಳುವುದಾಗಿ ಸರಿತಾ ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: