ಮೈಸೂರು

ವಿದ್ಯೆ ಕಲಿತವನಿಗೆ ಸಮಾಜದಲ್ಲಿ ಉತ್ತಮ ಸ್ಥಾನ : ಪ್ರೊ.ನಿ.ಗಿರಿಗೌಡ

ವಿದ್ಯೆ ಸಕಲ ಸಂಪತ್ತನ್ನು ತಂದುಕೊಡುತ್ತದೆ. ವಿದ್ಯೆ ಕಲಿತವನಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಇರುತ್ತದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಪ್ರೊ.ನಿ.ಗಿರಿಗೌಡ ತಿಳಿಸಿದರು.

ಮೈಸೂರಿನ ಅಕ್ಕನ ಬಳಗ ಶಾಲೆಯಲ್ಲಿ ಅರಿವು ಸಂಸ್ಥೆ ವತಿಯಿಂದ ಮಂಗಳವಾರ ಏರ್ಪಡಿಸಲಾದ ಸರ್ವಜ್ಞನ ವಚನಗಳು ಪುಸ್ತಕವನ್ನು ಪ್ರೊ. ನಿ. ಗಿರಿಗೌಡ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸರ್ವಜ್ಞನ ವಚನಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದರೆ ಅವರ ಜ್ಞಾನ ಶಕ್ತಿಯ ವಿಸ್ತಾರವನ್ನು ನೋಡಬೇಕಿದೆ. ಅವರು ಸುಮಾರು 500 ವರ್ಷಗಳ ಹಿಂದಿನ ವ್ಯಕ್ತಿ. ಜಾತ್ಯತೀತ ಮನೋಭಾವನೆಯನ್ನು ಹೊಂದಿದ್ದವರು. ಸಮಾಜದ ಓರೆ-ಕೋರೆಗಳನ್ನು ತಿದ್ದಿ ತೀಡಲು ನಾಡಿನಾದ್ಯಂತ ಸಂಚಾರ ಮಾಡುತ್ತಿದ್ದ ಜನರ ಕವಿ, ಸಾರ್ವಕಾಲಿಕ ಕವಿ ಸರ್ವಕಾಲಕ್ಕೂ ಅಜರಾಮರ ಎಂದು ಹೇಳಿದರು.

ಯಾರಿಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುತ್ತದೋ ಅವರು ಉತ್ತಮವಾಗಿ ಜೀವನ ಸಾಗಿಸಲು ಸಾಧ‍್ಯ. ಸಾಹಿತ್ಯ ಸ್ಫೂರ್ತಿ ಮತ್ತು ಪ್ರೇರಣೆಯನ್ನು ನೀಡುತ್ತದೆ. ವಿದ್ಯಾರ್ಥಿಗಳು ವಿದ್ಯೆ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು  ಕೊಡಬೇಕು. ಸೂಕ್ಷ್ಮವಾಗಿ ಯೋಚಿಸಬೇಕು ಎಂದು ಸಲಹೆ ನೀಡಿದರು.

ಬರಹಗಾರ ಬನ್ನೂರು ಕೆ ರಾಜು ಮಾತನಾಡಿ, ಸರ್ವಜ್ಞ ಎಂದರೆ ಜ್ಞಾನದ ಮಹಾಶಿಖರ. ತ್ರಿಕಾಲ ಜ್ಞಾನಿ. ವಿದ್ಯೆಯ ಮಹತ್ವವನ್ನು 17 ನೇ ಶತಮಾನದಲ್ಲೇ ತಿಳಿಸಿಕೊಟ್ಟ ಮಹನೀಯ. ವಿದ್ಯೆಯ ಮೂಲಕ ಇಡೀ ಪ್ರಪಂಚಕ್ಕೆ ಜ್ಞಾನದ ಬೆಳಕು ನೀಡಿದ ಕೀರ್ತಿ ಸರ್ವಜ್ಞನಿಗೆ ಸಲ್ಲುತ್ತದೆ. ಈ ಜಗತ್ತು ಕಂಡ ಶ್ರೇಷ್ಠ ವ್ಯಕ್ತಿ ಸರ್ವಜ್ಞ. ಇಂತಹ ಮಹಾನ್ ವ್ಯಕ್ತಿ ನಮ್ಮ ನೆಲದಲ್ಲಿ ಜನಿಸಿರುವುದು ನಮ್ಮ ಪುಣ್ಯ ಎಂದು ಹೇಳಿದರು.

‘ಸರ್ವಜ್ಞನ ವಚನಗಳು’ ಪುಸ್ತಕವನ್ನು ಓದಿದರೆ ಸಾಕು. ಇಡೀ ಬ್ರಹ್ಮಾಂಡವನ್ನೇ ಅರಿಯಬಹುದಾಗಿದೆ. ಅಂತಹ ಸತ್ವ ಸರ್ವಜ್ಞನ ವಚನಗಳಲ್ಲಿ ಅಡಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಜೆಡಿಎಸ್ ನಗರಾಧ‍್ಯಕ್ಷ ಕೆ.ಹರೀಶ್ ಗೌಡ, ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಮತ್ತಿತರರು ಉಪಸ‍್ಥಿತರಿದ್ದರು.

Leave a Reply

comments

Related Articles

error: