ಮೈಸೂರು

ಬಯಲು ಶೌಚ ಮುಕ್ತ ದಿನಾಚರಣೆ : ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವವರಿಗೆ ಗುಲಾಬಿ ಹೂ ನೀಡಿ ಅರಿವು

ಮೈಸೂರು,ನ.19:- ಬಯಲು ಶೌಚ ಮುಕ್ತ  ದಿನಾಚರಣೆಯ ಅಂಗವಾಗಿ ಇಂದು ಕೆ ಎಂ ಪ್ರವೀಣ್ ಕುಮಾರ್  ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲ್ಯಾನ್ಸ್ಡೌನ್ ಬಿಲ್ಡಿಂಗ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವವರಿಗೆ ಗುಲಾಬಿಯನ್ನು ನೀಡಿ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಿ ಎಂದು ಅರಿವು ಮೂಡಿಸಲಾಯಿತು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜಸೇವಕ ಡಾ. ಕೆ ರಘುರಾಂ ವಾಜಪೇಯಿ ಮಾತನಾಡಿ ಮೈಸೂರು ಸ್ವಚ್ಛ ನಗರಿ ಎಂದು ಈಗಾಗಲೇ ಖ್ಯಾತಿ ಪಡೆಯುತ್ತಿದೆ. ನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ ಕೂಡ ಎಲ್ಲ ನಾಗರಿಕರು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.  ಇದನ್ನು ಮನಗೊಂಡ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ ಅವರು ಉತ್ತಮವಾದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದಾರೆ .

ನಗರ ಪಾಲಿಕೆ ಹೆಚ್ಚು ಹೆಚ್ಚು ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಸಲಿ. ಸಾರ್ವಜನಿಕರಿಗೆ ಸಾಕಾಗುವಷ್ಟು ಶೌಚಾಲಯಗಳನ್ನು ಮಾಡಬೇಕು. ಗೂಗಲ್ ಮ್ಯಾಪ್ ನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಆ್ಯಡ್ ಮಾಡಬೇಕು. ಯಾವ ಯಾವುದೋ ಫಲಕಗಳನ್ನು ಹಾಕುವ ಬದಲು ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ದಾರಿಗಳ ಫಲಕಗಳನ್ನು ಹಾಕುವುದು ಮುಖ್ಯ. ಅವುಗಳ ಸ್ವಚ್ಛತೆಗೆ ಜನರನ್ನು ಇಡುವುದು ಮುಖ್ಯ. ಸ್ವಚ್ಛತೆಯನ್ನು ಕಾಪಾಡಬೇಕು. ಇಷ್ಟೆಲ್ಲ ಮಾಡಿದ ಮೇಲೆಯೂ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಅವರಿಗೆ ಐದು ಸಾವಿರ ದಂಡ ಹಾಗೂ ಒಂದು ದಿನ ಶೌಚಾಲಯಗಳನ್ನು ಕ್ಲೀನ್ ಮಾಡುವ ಕೆಲಸವನ್ನು ನೀಡಬೇಕು ಎಂದು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ ಮಾತನಾಡಿ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರದ ಪ್ರಮುಖ ಆದ್ಯತೆ. ಹಳ್ಳಿ ಪ್ರದೇಶದ ಪ್ರತಿ ಮನೆಗಳಿಗೂ ಶೌಚಾಲಯ ನಿರ್ಮಿಸಲು ಸರಕಾರಗಳು ಹಣಕಾಸಿನ ಸಹಾಯ ಮಾಡುತ್ತವೆ. ಆದರೆ ಗ್ರಾಮಗಳಲ್ಲಿ ಬಹುಸಂಖ್ಯಾತರು ಬಡವರು. ಒಂದೋ ಎರಡೋ ಕೋಣೆಗಳ ಮನೆ ಹೊಂದಿದವರು. ಶೌಚಾಲಯಗಳನ್ನು ಕಟ್ಟಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮನೆಯಲ್ಲೇ ಶೌಚಾಲಯ ನಿರ್ಮಿಸಲು ಆಗದವರಿದ್ದಾರೆ. ಮೂಲಭೂತ ನೀರಿನ ವ್ಯವಸ್ಥೆ ಇಲ್ಲವೆ ಇಲ್ಲ, ,ಕೆರೆ ಕಟ್ಟೆ ಬಾವಿಗಳಿಂದ ನೀರು ತಂದು ಸಂಗ್ರಹಿಸುವ ಪರಿಸ್ಥಿತಿ. ಇದೆಲ್ಲ ಗೊತ್ತಿದ್ದು ಸರಕಾರ ಪ್ರತಿ ಗ್ರಾಮಗಳಲ್ಲಿ ಸ್ವಂತ ಶೌಚಾಲಯ ನಿರ್ಮಿಸಿಕೊಳ್ಳಲು ಹಣ ನೀಡುತ್ತಿದೆ. ಆ ಹಣದ ಉಪಯೋಗ ಬಳಕೆಯಾಗುತ್ತಿದೆಯೇ ಎಂಬುದನ್ನು ಗಮನಿಸುವುದು ನಮ್ಮ ಜವಾಬ್ದಾರಿ ಕೂಡ.  ರಾಜಕಾರಣಿಗಳು , ಭ್ರಷ್ಟ ನಿರ್ಲಕ್ಷ್ಯ ಅಧಿಕಾರಿಗಳು ಮುಗ್ಧ  ಹಳ್ಳಿಗರ ಬಾಯಿಗೆ ಮುಸುರೆ ಒರೆಸಿ ದುಡ್ಡು ಹೊಡೆಯುವುದು ಸಾಮಾನ್ಯ.  ಬಯಲು ಶೌಚ ಮುಕ್ತ ಗ್ರಾಮವೆಂದು ಸಾರಿಕೊಂಡು ಪುರಸ್ಕಾರ ಪಡೆಯುವ ಗ್ರಾಮಗಳಲ್ಲಿ ಪ್ರತಿಶತ 99 ರಷ್ಟು ಜನ ಈಗಲೂ ಬೆಳಿಗ್ಗೆ ಶೌಚಕ್ಕೆ ಹೊರಗೆ ಹೋಗುತ್ತಿರುವುದು ಜಗಕ್ಕೆ ಗೊತ್ತಿರುವ ಸಂಗತಿ. ಇದನ್ನು ತಡೆಯುವುದು ಪ್ರತಿಯೊಬ್ಬ ಸಾರ್ವಜನಿಕರ ಸಾಮಾಜಿಕ ಕರ್ತವ್ಯ ಎಂದರು.

ಈ ಸಂದರ್ಭ ಬಿ ಎಸ್ ಪಿ ಮೈಸೂರು ನಗರಾಧ್ಯಕ್ಷರಾದ ಬಸವರಾಜ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಮೈಸೂರು ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಕುಮಾರ್ ಗೌಡ ,ಕಾಂಗ್ರೆಸ್ ಯುವ ಮುಖಂಡರಾದ ಜಿ ರಾಘವೇಂದ್ರ ,ಎಸ್ ಎನ್ ರಾಜೇಶ್ ,ಟ್ರಸ್ಟ್‌ ನ ಪದಾಧಿಕಾರಿಗಳಾದ ಡಿ ಕೆ ನಾಗಭೂಷಣ್ , ಚಕ್ರಪಾಣಿ, ಜಯಸಿಂಹ, ಸಂದೇಶ್, ರಂಗನಾಥ್ ,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: