ಪ್ರಮುಖ ಸುದ್ದಿ

ಬೆಂಗಳೂರಿನ ಥಾಮಸ್ ಕುರಿಯನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ನೇಮಕ

ರಾಜ್ಯ(ಬೆಂಗಳೂರು)ನ.20:-  ಸುಂದರ್ ಪಿಚೈ ಬಳಿಕ ಮತ್ತೊಬ್ಬ ಭಾರತೀಯನಿಗೆ ಸಾಫ್ಟ್‌ವೇರ್ ದೈತ್ಯ ಗೂಗಲ್ ಕಂಪನಿಯಲ್ಲಿ ಉನ್ನತ ಹುದ್ದೆ ದೊರೆತಿದ್ದು, ಒರಾಕಲ್ ಕಾರ್ಪ್‌ನ ಪ್ರಾಡಕ್ಟ್ ಚೀಫ್ ಆಗಿದ್ದ ಬೆಂಗಳೂರಿನ ಥಾಮಸ್ ಕುರಿಯನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ನ.26ರಂದು ಗೂಗಲ್ ಸೇರಲಿರುವ ಕುರಿಯನ್, 2019 ವರ್ಷಾರಂಭದಲ್ಲಿ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ಕೆಲಸ ಆರಂಭಿಸಲಿದ್ದಾರೆ ಎಂದು ಗೂಗಲ್ ಪ್ರಕಟಿಸಿದೆ.

ಕುರಿಯನ್ ಸುಮಾರು 22 ವರ್ಷಗಳ ಕಾಲ ಒರಾಕಲ್‌ನಲ್ಲಿ ಸೇವೆ ಸಲ್ಲಿಸಿದ್ದು, ಒರಾಕಲ್‌ನ ‘ಕ್ಲೌಡ್’ ವಿಭಾಗವನ್ನು ವಿಸ್ತರಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಅಲ್ಲದೇ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದರು.ಸುಮಾರು 13 ವರ್ಷ ಒರಾಕಲ್‌ನ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರಾಗಿದ್ದ ಕುರಿಯನ್, 32 ದೇಶಗಳಿಗೆ ವಿಸ್ತರಿಸಿರುವ 35 ಸಾವಿರ ಮಂದಿಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಕುರಿಯನ್ ನೇಮಕಾತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಗೂಗಲ್ ಸಿಇಓ ಸುಂದರ್ ಪಿಚೈ, ಅವರ ದೂರದೃಷ್ಟಿ, ಗ್ರಾಹಕ ಕೇಂದ್ರಿತ ಸೇವೆ, ಹಾಗೂ ಅಗಾಧ ಅನುಭವ ಗೂಗಲ್‌ನ ಕ್ಲೌಡ್ ವ್ಯವಹಾರಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದ್ದಾರೆ.ಈಗ ಡಯಾನ್ ಗ್ರೀನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿದ್ದಾರೆ. ಅವರು 2019 ಜನವರಿವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದು, ಜವಾಬ್ದಾರಿಯನ್ನು ಕುರಿಯನ್‌ಗೆ ವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: