
ಪ್ರಮುಖ ಸುದ್ದಿಮೈಸೂರು
ದಿ.ದೇವರಾಜ ಅರಸ್ ಗೆ ಸೂಟ್ ಕೇಸ್ ವಿಷಯ ಸ್ಪಷ್ಟಪಡಿಸಲು ‘ಹೆಚ್.ಡಿ.ಡಿ’ಗೆ ವಿವಿಧ ಸಂಘಟನೆಗಳ ಒತ್ತಾಯ
ಮಾಜಿ ಪ್ರಧಾನಿ ದೇವೇಗೌಡರಿಗೆ ಆಗ್ರಹ
ಮೈಸೂರು, ನ.20 : ದೇಶ ಕಂಡ ಮುತ್ಸದ್ಧಿ ರಾಜಕಾರಣಿ, ಭೂಹೀನರಿಗೆ ಉಳುವವನೇ ಒಡೆಯ ಕಾನೂನು ಮೂಲಕ ಭೂ ಒಡೆತನ ನೀಡಿದ ಸಾಮಾಜಿಕ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸ್ ಅವರು ಒಮ್ಮೆ ತಮಗೆ ಸೂಟ್ಕೇಸ್ ನೀಡಲು ಬಂದಿದ್ದರೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿರುವುದು ಅಕ್ಷಮ್ಯವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ ಪುಟ್ಟಸಿದ್ದಶೆಟ್ಟಿ ಆಗ್ರಹಿಸಿದರು.
ಕಾಯಕ ಸಮಾಜ, ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕ ಸಂಘಟನೆ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹೇಳಿಕೆ ದೇವೇಗೌಡರ ಬಗ್ಗೆ ಕರ್ನಾಟಕ ಹೊಂದಿದ್ದ ಗೌರವವನ್ನು ಕಳೆದಿದ್ದು, ಅರಸ್ ಅವರು ಈ ರಾಷ್ಟ್ರ ಕಂಡ ಧೀಮಂತ ನಾಯಕರಾಗಿದ್ದಾರೆ. ಒಂದು ವೇಳೆ ಅವರ ಆರೋಪ ನಿಜವಾಗಿದ್ದಲ್ಲಿ ಅವರು ಬದುಕಿದ್ದಾಗಲೇ ಆ ಬಗ್ಗೆ ಹೇಳಿಕೆ ನೀಡಬಹುದಾಗಿತ್ತು. ಆದರೆ, ಈಗ ಯಾವ ಕಾರಣಕ್ಕಾಗಿ ಈ ಹೇಳಿಕೆ ನೀಡಲಾಗಿದೆ. ಇದರ ಹಿಂದೆ ಯಾವ ಸಂಚಿದೆ ಎಂಬುದು ಬಹಿರಂಗಗೊಳ್ಳಬೇಕಾಗಿದೆ ಎಂದು ನುಡಿದರು.
ಇನ್ನು ದಲಿತರ ಹಕ್ಕುಬಾಧ್ಯತೆ ರಕ್ಷಣೆಗಾಗಿ ಪ್ರಗತಿಪರ ಚಿಂತಕರ ಒಕ್ಕೂಟ ಹಾಗೂ ಜಿಲ್ಲೆಯ ದಸಂಸ, ಕಾಯಕ ಸಮಾಜಗಳ ಒಕ್ಕೂಟ ಒಂದು ಸಂಯುಕ್ತ ರಂಗ ರಚಿಸಿಕೊಂಡಿದ್ದು, ಅದು ಎಚ್.ಡಿ. ದೇವೇಗೌಡರ ಹೇಳಿಕೆಯನ್ನು ಕಟುವಾಗಿ ಖಂಡಿಸುತ್ತದೆಂದರು.
ಜೊತೆಗೆ, ಎಚ್.ಡಿ. ದೇವೇಗೌಡರು ತಮ್ಮ ಆ ಹೇಳಿಕೆ ಬಗ್ಗೆ ರಾಜ್ಯ, ರಾಷ್ಟ್ರದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಇನ್ನು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಂಬಡ್ತಿ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರಲ್ಲದೆ, ಈ ವಿಷಯದಲ್ಲಿ ಮುಖ್ಯಮಂತ್ರಿ ಜಾಗರೂಕತೆಯಿಂದ ವರ್ತಿಸದಿದ್ದಲ್ಲಿ ಅದೊಂದು ಎಚ್ಚರಿಕೆ ಗಂಟೆಯಾಗಲಿದೆ. ವಿಷಯವನ್ನು ಮುಂದೂಡುತ್ತಲೇ ಹೋದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸಿದರು.
ಅಲ್ಲದೆ, ರಾಜ್ಯದಲ್ಲಿನ ಜನಸಂಖ್ಯೆಯಲ್ಲಿ ಶೇ. 70 ರಷ್ಟು ಎಸ್ಸಿ, ಎಸ್ಟಿ, ಹಿಂದುಳಿದವರು, ಕಾಯಕ ಸಮಾಜದವರು, ಅಲ್ಪಸಂಖ್ಯಾತರೇ ಇದ್ದು, ಇವರ ಮತಗಳು ಯಾವುದೇ ಚುನಾವಣೆಯಲ್ಲಿ ನಿರ್ಣಾಯಕವಾಗುತ್ತವೆ. ಹೀಗಾಗಿ ಇವರ ಸಂವಿಧಾನಿಕ ಹಕ್ಕುಗಳಿಗೆ ಕೈ ಹಾಕಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ಲೇಷಿಸಿದರು.
ಇದೇ ವೇಳೆ, ಕೆಪಿಎಸ್ಸಿ ನೇಮಕಾತಿ ವೇಳೆ ಪ್ರತಿಭಾವಂತ ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಡಿಯಲ್ಲಿ ಆಯ್ಕೆ ಆಗಬಾರದೆಂಬ ಪತ್ರ ವಿರುದ್ಧ ಪ್ರಿಯಾಂಕ ಖರ್ಗೆ, ಡಾ.ಜಿ. ಪರಮೇಶ್ವರ್ ದನಿಯೆತ್ತಿದ್ದಾರೆ. ಆದರೆ ಈ ಕುರಿತ ಪತ್ರ ವ್ಯವಹಾರ ತಮ್ಮ ಗಮನಕ್ಕೇ ಬಂದಿರಲಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಜಾರಿಕೊಳ್ಳಲು ಯತ್ನಿಸಿದರೆ ಅದಕ್ಕೆ ಕ್ಷಮೆಯಿಲ್ಲ ಎಂದು ಸಹಾ ತಿಳಿಸಿದರು.
ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ, ಬೋರಪ್ಪಶೆಟ್ಟಿ, ಪ್ರಸನ್ನ, ನಂದೀಶ್, ಇತರರ ಇದ್ದರು. (ವರದಿ : ಕೆ.ಎಂ.ಆರ್)