ಕ್ರೀಡೆ

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್ ಭಾರತಕ್ಕೆ ಇಂಗ್ಲೆಂಡ್ ಸವಾಲು

ನವದೆಹಲಿ,ನ.20-ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನ ಸೆಮಿಫೈನಲ್ ಗೆ ವೇದಿಕೆ ಸಿದ್ಧಗೊಂಡಿದ್ದು, ಭಾರತ-ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ನ.22 ರಂದು ನಡೆಯುವ ಮೊದಲ ಸೆಮಿಫೈನಲ್ ಮುಖಾಮುಖಿಯಲ್ಲಿ ಆಸೀಸ್ ಹಾಗೂ ವಿಂಡೀಸ್ ತಂಡಗಳು ಪರಸ್ಪರ ಸೆಣಸಲಿದೆ. ಅದೇ ದಿನ ನಡೆಯಲಿರುವ ಎರಡನೇ ಸೆಮಿಫೈನಲ್ ಕದನದಲ್ಲಿ ಇಂಗ್ಲೆಂಡ್ ಸವಾಲನ್ನು ಭಾರತ ಎದುರಿಸಲಿದೆ.

ಅಜೇಯ ಓಟ ಮುಂದುವರಿಸಿರುವ ಆತಿಥೇಯ ವೆಸ್ಟ್‌ಇಂಡೀಸ್ ಹಾಗೂ ಭಾರತ ತಂಡಗಳು, ಅನುಕ್ರಮವಾಗಿ ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿದೆ. ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸಹ ಸೆಮಿಫೈನಲ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ವಿಜೇತ ತಂಡವು ನ.24 ರಂದು ಆ್ಯಂಟಿಗುವಾದಲ್ಲಿ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ. ಒಟ್ಟು 10 ತಂಡಗಳು ಭಾಗವಹಿಸಿದ ತಂಡಗಳನ್ನು ತಲಾ ಐದರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.

ಸೆಮಿಫೈನಲ್ ಹಾಗೂ ಫೈನಲ್ ವೇಳಾಪಟ್ಟಿ ಇಂತಿದೆ: ನ.22, ಮೊದಲ ಸೆಮಿಫೈನಲ್: ಆಸ್ಟ್ರೇಲಿಯಾ ವುಮೆನ್ vs ವೆಸ್ಟ್‌ಇಂಡೀಸ್ ವುಮೆನ್, ಆ್ಯಂಟಿಗುವಾ, ಸಮಯ: ಭಾರತೀಯ ಕಾಲಮಾನದಂತೆ ನ.23ರಂದು ಮಧ್ಯರಾತ್ರಿ 1.30ಕ್ಕೆ ಆರಂಭ.

ದ್ವಿತೀಯ ಸೆಮಿಫೈನಲ್: ಇಂಡಿಯಾ ವುಮೆನ್ vs ಇಂಗ್ಲೆಂಡ್ ವುಮೆನ್, ಆ್ಯಂಟಿಗುವಾ, ಸಮಯ: ಭಾರತೀಯ ಕಾಲಮಾನದಂತೆ ನ.23ರಂದು ಬೆಳಗ್ಗಿನ ಜಾವ 5.30ಕ್ಕೆ ಆರಂಭ.

ಫೈನಲ್: ನ.24 ಶನಿವಾರ, ಆ್ಯಂಟಿಗುವಾ, ಸಮಯ: ಭಾರತೀಯ ಕಾಲಮಾನದಂತೆ ನ.25ರಂದು ಬೆಳಗ್ಗಿನ ಜಾವ 5.30ಕ್ಕೆ ಆರಂಭ. (ಎಂ.ಎನ್)

 

Leave a Reply

comments

Related Articles

error: