ಕರ್ನಾಟಕ

ಬಲಿಷ್ಠ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಯುವಜನರ ಮೇಲಿದೆ: ಯಾಲಕ್ಕಿ ಗೌಡ

ಮಂಡ್ಯ (ನ.20): ಬಲಿಷ್ಠ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಯುವಜನರ ಮೇಲಿದೆ. ಯಾವುದೇ ರಾಷ್ಟ್ರ ಬಲಿಷ್ಠವಾಗಿ ಬೆಳೆಯಬೇಕಾದರೆ ಯುವಜನರ ಸಹಭಾಗಿತ್ವ ಅತ್ಯಗತ್ಯ. ಯುವಜನರು ಇದನ್ನು ಅರಿತು ದೇಶದವನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಯಾಲಕ್ಕಿ ಗೌಡ ಅವರು ತಿಳಿಸಿದ್ದಾರೆ.

ಮಂಡ್ಯ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸ್ಪಂದನ ಕೇಂದ್ರದ ಸಹಯೋಗದಲ್ಲಿ ಸೋಮವಾರ ನಡೆದ ಜಿಲ್ಲಾ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಯುವಜನರಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಸಿಕ್ಕಂತಹ ಯುವಜನೋತ್ಸವ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಯುವಜನರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಸಂಪಾದಿಸುವ ಮೂಲಕ ಮಂಡ್ಯ ಜಿಲ್ಲೆಗೆ ಕೀರ್ತಿಯನ್ನು ತರಬೇಕು ಎಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಭಾಗದಿಂದ ಬಂದ ಬಹಳಷ್ಟು ಪ್ರತಿಭಾವಂತ ಯುವಜನರು ಉನ್ನತಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದು, ಅವರನ್ನು ಮಾದರಿಯಾಗಿ ಮಾಡಿಕೊಂಡು ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಜೀವನದಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರ ನಾಯಕರುಗಳಾದ ಸರ್ಧಾರ್ ವಲ್ಲಭಬಾಯಿ ಪಟೇಲ್ ಹಾಗೂ ಇಂದಿರಾ ಗಾಂಧಿ ಅವರ ಗೌರವಾರ್ಥವಾಗಿ ರಾಷ್ಟ್ರೀಯ ಐಕ್ಯತಾ ದಿನಾಚರಣೆ ಸಪ್ತಾಹ ನಡೆಸಲಾಗುತ್ತಿದ್ದು, ದೇಶದ ಏಕತೆ ಮತ್ತು ಸಮಗ್ರತೆ ವಿಷಯದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್‍ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿ ಹುಸ್ಕೂರು ಅವರು ಸ್ವಾಮಿ ವಿವೇಕಾನಂದ, ಸರ್ಧಾರ್ ವಲ್ಲಭಬಾಯಿ ಪಟೇಲ್, ಮಹಾತ್ಮಗಾಂಧೀಜಿ ಅವರು ನಡೆದ ಹಾದಿಯನ್ನು ಸ್ಮರಿಸುತ್ತ ದೇಶದಲ್ಲಿರುವ ಪ್ರತಿಯೊಬ್ಬರೂ ದೀಮಂತ ರಾಷ್ಟ್ರ ನಾಯಕರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಚಿಕಾಗೋ ಸಮಾವೇಶದಲ್ಲಿ ಸ್ವಾಮಿ ವಿವೇಕಾನಂದ ಅವರು ಮಾಡಿದ ಭಾಷಣ ವಿಶ್ವದಲ್ಲಿ ದೇಶಕ್ಕೆ ಮನ್ನಣೆ ದೊರೆಯುವಂತೆ ಮಾಡಿತು. ಸ್ವಾಮಿ ವಿವೇಕಾನಂದರ ಆಶಯಗಳನ್ನು ನೆರವೇರಿಸಲು ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಮುನ್ನಡೆಸುವ ಜವಾಬ್ದಾರಿ ಯುವಜನರ ಮೇಲಿದೆ. ದೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಶಾಂತಿಯುತವಾಗಿ ಜೀವನ ನಡೆಸುವಂತಾಗಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ವಿ.ನಂದೀಶ್, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಸಿದ್ದರಾಮಪ್ಪ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. (ಎನ್.ಬಿ)

Leave a Reply

comments

Related Articles

error: