ಕ್ರೀಡೆಮೈಸೂರು

ಆಲ್ ಇಂಡಿಯಾ ಅಂಡರ್-15 ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿಗೆ ಚಾಲನೆ

ಮೈಸೂರು,ನ.21:- ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸಿಯಂ ಸಭಾಂಗಣದಲ್ಲಿ ಮೈಸೂರು ಚೆಸ್ ಕ್ಲಬ್, ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಚೆಸ್ ಫೇಡರೇಷನ್  ವತಿಯಿಂದ ಆಯೋಜಿಸಲಾದ ಆಲ್ ಇಂಡಿಯಾ ಅಂಡರ್-15 ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿಗೆ ಚಾಲನೆ ನೀಡಲಾಯಿತು.

ಗೋಕುಲಂ ಶಿಕ್ಷಣ ಫೌಂಡೇಷನ್ನಿನ ಗೌರವಾಧ್ಯಕ್ಷ ಡಾ.ಎಂ.ಆರ್.ಜಯರಾಮ್ ಚೆಸ್ ಆಡುವ ಮೂಲಕ  ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಚೆಸ್ ಬುದ್ಧಿಮಟ್ಟವನ್ನು ಹೆಚ್ಚಿಸುವ ಆಟ. ಇದು ಭಾರತೀಯರ ಕ್ರೀಡೆಗಳಲ್ಲಿ ಒಂದಾಗಿರುವುದು ಹೆಮ್ಮೆಯ ವಿಷಯ. ಈ ಆಟದಲ್ಲಿ ನಂಬರ್ ವನ್ ಆಗಿರುವ ಗ್ರ್ಯಾಂಡ್ ಮಾಸ್ಟರ್ ಆನಂದ್ ಕೂಡ ಭಾರತದವರೇ.  ಮೈಸೂರು ಕ್ರೀಡೆ,ಸಾಹಿತ್ಯ, ಶಿಕ್ಷಣಕ್ಕೆ ಪ್ರಾಶಸ್ತ್ಯವಾದ ಸ್ಥಳವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಮಾತನಾಡಿ ಚೆಸ್ ಬೌದ್ಧಿಕ ಕಸರತ್ತು ನಡೆಸುವ ಕ್ರೀಡೆ. ಇಂದು ದೈಹಿಕ ಮತ್ತು ಬೌದ್ಧಿಕ ಕಸರತ್ತುಗಳನ್ನು ನಡೆಸುವ ಅಗತ್ಯವಿದ್ದು, ಹಾಗಿದ್ದಾಗ ಮಾತ್ರ ಮಾನಸಿಕವಾಗಿ ನೆಮ್ಮದಿ, ಆರೋಗ್ಯದಿಂದಿರಲು ಸಾಧ್ಯ ಎಂದರು. ಪೋಷಕರು ತಮ್ಮ ಮಕ್ಕಳಲ್ಲಿನ ಕ್ರೀಡೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಯಾವುದೇ ಕ್ಷೇತ್ರವಾದರೂ ಶ್ರಮವಿಲ್ಲದೇ ಸಾಧನೆ ಲಭಿಸದು ಎಂದು  ತಿಳಿಸಿದರು.

ಚೆಸ್ ಪಟು ತೇಜುಕುಮಾರ್ ಮಾತನಾಡಿ ಮೈಸೂರಿನಲ್ಲಿ ಅಂಡರ್-15 ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿ ನಡೆಯುತ್ತಿದ್ದು, ದೇಶದ ವಿವಿಧೆಡೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದಾರೆ. ಮೈಸೂರಿನ ಚೆಸ್ ಕ್ರೀಡಾ ಪಟುಗಳಿಗೂ ಇದು ಒಂದು ಸದಾವಕಾಶವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ತಮಿಳುನಾಡು ಗುಜರಾತ್ ಗಳಲ್ಲಿ ಕ್ರೀಡಾಶಾಲೆಗಳನ್ನು ತೆರೆಯಲಾಗುತ್ತಿದ್ದು, ಮಕ್ಕಳ ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.

ಈ ಸಂದರ್ಭ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್, ಎಐಸಿಎಫ್ ಜಂಟಿ ಕಾರ್ಯದರ್ಶಿ ಹನುಮಂತು, ಯುಕೆಸಿಎ ಸಿಇಒ ಅರವಿಂದ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: