ಪ್ರಮುಖ ಸುದ್ದಿ

ಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಆರು ಜನ ಆರೋಪಿಗಳ ಬಂಧನ

ರಾಜ್ಯ(ಮಂಡ್ಯ)ನ.21:- ಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

ನೆಚ್ಚಿನ ನಟನನ್ನು ನೋಡಲು ಹೋಗಿ ಸಿಕ್ಕಿಬಿದ್ದ ಜೋಡಿ ಮರ್ಯಾದಾ ಹತ್ಯೆಗೆ ಬಲಿಯಾಗಿದೆ ಎನ್ನಲಾಗಿದೆ. ಬೇರೆ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಒಂದೇ ಕಾರಣಕ್ಕೆ ಸ್ವಂತ ಮಗಳು ಮತ್ತು ಅಳಿಯನನ್ನೇ ತಂದೆ ಜೀವಂತವಾಗಿ ಕೈಕಾಲು ಕಟ್ಟಿ ನೀರಿಗೆ ಎಸೆದ ಅಮಾನವೀಯ ಕೃತ್ಯ ಬಯಲಾಗಿದೆ. ನದಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ-ಯುವತಿಯ ಶವ ಪತ್ತೆಯಾಗಿತ್ತು.

ನವೆಂಬರ್ 13 ಮತ್ತು 15 ರಂದು ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿಯ ಕೆರೆಯೊಂದರಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬೆಳಕವಾಡಿ ಪೊಲೀಸರಿಗೆ ಮೃತರಿಬ್ಬರು ತಮಿಳುನಾಡಿನ ಹೊಸೂರು ಮೂಲದ ಸ್ವಾತಿ ಮತ್ತು ನಂದೀಶ್ ಎಂಬುದು ತಿಳಿದು ಬಂದಿತ್ತು.

ಇಬ್ಬರು ಬೇರೆ ಜಾತಿಯವರಾಗಿದ್ದು, ಮೂರು ತಿಂಗಳ ಹಿಂದಷ್ಟೆ ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆ ಯುವತಿಯ ಮನೆಯವರಿಗೆ ಇಷ್ಟವಿಲ್ಲದ ಕಾರಣ, ಯುವ ಜೋಡಿ ಯಾರಿಗೂ ಗೊತ್ತಿಲ್ಲದಂತೆ ತಲೆ ಮರೆಸಿಕೊಂಡಿದ್ದರು. ಆದರೆ ಹೊಸೂರಿನಲ್ಲಿ ಚಿತ್ರನಟ ಕಮಲ್ ಹಾಸನ್ ಕಾರ್ಯಕ್ರಮವೊಂದನ್ನು ನೋಡಲು ಬಂದಿದ್ದ ಯುವಜೋಡಿ ಯುವತಿಯ ಮನೆಯವರಿಗೆ ಸಿಕ್ಕಿಬಿದ್ದಿದ್ದಾರೆ.

ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಎಂದು ಸುಳ್ಳು ಹೇಳಿ ಮಗಳನ್ನು ನಂಬಿಸಿದ ಸ್ವಾತಿ ತಂದೆ ಶ್ರೀನಿವಾಸ್ ಮಗಳು ಮತ್ತು ಅಳಿಯನನ್ನು ಮನೆಗೆ ಕರೆ ತಂದಿದ್ದರು. ನಂತರ ಮಳವಳ್ಳಿ ಸಮೀಪವಿರುವ ಮುತ್ತತ್ತಿ ಆಂಜನೇಯ ಸ್ವಾಮಿಗೆ ಪೂಜೆ ಮಾಡಿಸಿಕೊಂಡು ಬರೋಣ ಎಂದು ಸುಳ್ಳು ಹೇಳಿ ಮಗಳು ಮತ್ತು ಅಳಿಯನನ್ನು ಶಿವನಸಮುದ್ರದ ಬಳಿ ಕರೆದುಕೊಂಡು ಹೋಗಿದ್ದರು. ಬಳಿಕ ಅಲ್ಲಿ ಜೀವಂತವಾಗಿ ಕೈಕಾಲು ಕಟ್ಟಿ ಕೆರೆಗೆ ಎಸೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಇದೀಗ ಪೊಲೀಸರು ಯುವತಿಯ ತಂದೆ ಶ್ರೀನಿವಾಸ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: