ಪ್ರಮುಖ ಸುದ್ದಿಮೈಸೂರು

ಮೃಗಾಲಯದಲ್ಲಿ ಹಕ್ಕಿಗಳಿಗೆ ಕಾಣಿಸಿಕೊಂಡಿದೆ ಏವಿಯನ್ ರೋಗ : ಒಂದು ತಿಂಗಳು ಪ್ರವಾಸಿಗರಿಗೆ ನಿರಾಸೆ

zoo-3ಮೈಸೂರಿನ ಮೃಗಾಲಯದಲ್ಲಿ ಏನಾಗಿದೆಯೋ ಗೊತ್ತಿಲ್ಲ. ಇತ್ತೀಚೆಗೆ ಪ್ರಾಣಿಗಳ ಸರಣಿ ಸಾವು ನಡೆದಿತ್ತು. ಅದಕ್ಕೆ ಹೆಚ್ಚಿನ ಚಳಿ ಹಾಗೂ ಆರೋಗ್ಯದ ಸಮಸ್ಯೆ ಕುರಿತ ಸಾವು ಎಂಬ ಹೇಳಿಕೆಯನ್ನೂ ನೀಡಲಾಗಿತ್ತು. ಇದೀಗ ಮತ್ತೊಂದು ವಿಷಯ ಹೊರಬೀಳುತ್ತಿದೆ. ಬುಧವಾರದಿಂದ ಒಂದು ತಿಂಗಳ ಕಾಲ (ಜ.4 ರಿಂದ ಫೆ.2) ಮೃಗಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಇದು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನಿರಾಸೆಯುಂಟು ಮಾಡಿದೆ.

ವಿಶ್ವವಿಖ್ಯಾತ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪಕ್ಷಿಗಳಲ್ಲಿ ಮಾರಕ ರೋಗದ ವೈರಾಣುಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ರೋಗ ಪತ್ತೆಯಾಗಿರುವ ಹಿನ್ನಲೆಯಲ್ಲಿ ಮೃಗಾಲಯಕ್ಕೆ ಒಂದು ತಿಂಗಳ ಕಾಲ ರಜೆ‌ ಘೊಷಣೆ ಮಾಡಲಾಗಿದೆ. ಮಾತ್ರವಲ್ಲ ಈ ರೋಗದಿಂದಾಗಿ ಮೃಗಾಲಯದ ಪಕ್ಷಿಗಳು ಏಕಾಏಕಿ ಮೃತಪಟ್ಟಿವೆ. ಈ ಕುರಿತು ‘ಸಿಟಿಟುಡೆ’ಗೆ ಮೃಗಾಲಯದ ಉನ್ನತ ಮೂಲಗಳಿಂದ ಮಾಹಿತಿ  ಲಭ್ಯವಾಗಿದೆ.

ಕಾಣಿಸಿದೆ ಏವಿಯನ್ ರೋಗ

ಮೃಗಾಲಯದಲ್ಲಿರುವ ಕೆಲ ಪಕ್ಷಿಗಳು ಏಕಾಏಕಿ ಸಾವನ್ನಪ್ಪಿರುವುದಕ್ಕೆ ಕಾರಣ, ಏವಿಯನ್ ಇನ್ ಫ್ಲುಯೆನ್ಜಾ ಹೆಚ್5ಎನ್8 ಎಂಬ ಮಾರಕ ರೋಗ. ಈ ರೋಗಕ್ಕೆ ತುತ್ತಾಗಿ ಹಲವು ಪಕ್ಷಿಗಳು ಸಾವನ್ನಪ್ಪಿದೆ. ಅಲ್ಲದೆ ಇದೊಂದು ಹಕ್ಕಿ ಜ್ವರದ ಮಾದರಿಯ ಮಾರಕ ರೋಗ ಎನ್ನಲಾಗುತ್ತಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ.

ನಾಳೆಯಿಂದ ಒಂದು ತಿಂಗಳವರೆಗೆ ಮೃಗಾಲಯಕ್ಕೆ ಪ್ರವೇಶವಿಲ್ಲ

ಮುನ್ನೆಚ್ಚರಿಕೆ ಕ್ರಮವಾಗಿ ನಾಳೆಯಿಂದ ಒಂದು ತಿಂಗಳ ಕಾಲ ಚಾಮರಾಜೇಂದ್ರ ಮೃಗಾಲಯ ಪ್ರವೇಶಕ್ಕೆ ಅವಕಾಶ ನೀಡದಿರಲು ಮೃಗಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಪ್ರಮುಖವಾಗಿ ಜನವರಿ 4 ರಿಂದ ಬರುವ ಫೆಬ್ರುವರಿ 2 ರವರೆಗೂ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದ್ದು, ನಾಳೆಯಿಂದ ಒಂದು ತಿಂಗಳ ಕಾಲ ಸಾರ್ವಜನಿಕರು ಮೃಗಾಲಯ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

ಅಧಿಕಾರಿಗಳಿಂದ ಮಾಹಿತಿ

ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕಿ ಕಮಲಾ ಕರಿಕಾಳನ್ ಅವರೇ ಈ‌ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಮೃಗಾಲಯದ ಆವರಣದಲ್ಲಿ ಔಷಧಿಯನ್ನು ಸಿಂಪಡಣೆ ಮಾಡುವ ಮೂಲಕ ಹಕ್ಕಿ ಜ್ವರದ ರೋಗಾಣುಗಳು ಇತರ ಪ್ರದೇಶಗಳಿಗೆ ಹರಡದಂತೆ ಕ್ರಮ ಕೈಗೊಂಡಿರುವುದಾಗಿ ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ. ಇನ್ನೂ ಕೆಲಸಗಾರರು ಕೂಡ ಕೈ-ಕಾಲಿಗೆ ಗ್ಲೌಸ್, ಮುಖಕವಚ ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದಾಗಿಯೂ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ನಾಳೆಯಿಂದ ಮಾರಕ ರೋಗದಿಂದಾಗಿ ಮೃಗಾಲಯಕ್ಕೆ ಒಂದು ತಿಂಗಳು ರಜೆ‌ ಘೋಷಣೆ ಮಾಡಲಾಗಿದೆ. ಆದರೆ‌ ಮೃಗಾಲಯಕ್ಕೆ ಆಗಮಿಸುವ ಪ್ರಾಣಿ ಪ್ರಿಯರಿಗೆ ಇದು ಬೇಸರದ ವಿಷಯವಾದರೂ, ಹೆಚ್ಚಿನ ಅನಾಹುತಕ್ಕೂ ಮುನ್ನ ಕೈಗೊಂಡ ಮೃಗಾಲಯದ ಅಧಿಕಾರಿಗಳು ಕೈಗೊಂಡ ಕ್ರಮ ಶ್ಲಾಘನೀಯ.

ವರದಿ: ಸುರೇಶ್ ಎನ್.

Leave a Reply

comments

Related Articles

error: