ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ರಾಜಧಾನಿಯಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧ!?

ಬೆಂಗಳೂರು (ನ.21): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿರುವ ಕಾರಣ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಸರ್ಕಾರವು ಸದ್ಯದಲ್ಲೇ ಕೆಲವು ಕಠಿಣ ಸಾರಿಗೆ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೊನ್ನೆಯಷ್ಟೇ ಖಡಕ್ ವಾರ್ನ್ ಮಾಡಿದ್ದ ಸುಪ್ರೀಂಕೋರ್ಟ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಳೆಯ ಕಾರುಗಳನ್ನು ಬ್ಯಾನ್ ಮಾಡುವಂತೆ ಆದೇಶ ನೀಡಿತ್ತು.

ಹೀಗಾಗಿ ದಿಲ್ಲಿಯ ಪರಿಸ್ಥಿತಿ ಬೆಂಗಳೂರಿಗೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿಯನ್ನು ಮುಂದಿನ 2 ವರ್ಷಗಳ ರದ್ದುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಹೊಸ ಕಾಯ್ದೆ ಅನುಷ್ಠಾನದಿಂದ ಆಗಬಹುದಾದ ಸಾಧಕ-ಭಾದಕಗಳ ಕುರಿತಾಗಿ ಪರಿಶೀಲನೆ ನಡೆಸುತ್ತಿದೆ.

ಕಳೆದ ವಾರವಷ್ಟೇ ಈ ಬಗ್ಗೆ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮುಂದಿನ 2-3 ವರ್ಷ ಹೊಸ ವಾಹನಗಳ ನೋಂದಣಿ ರದ್ದುಪಡಿಸುವ ಕುರಿತಂತೆ ಚಿಂತನೆ ನಡೆಸಲಾಗಿದೆ ಎಂದಿದ್ದರು. ಅದೇ ವಿಚಾರ ಇದೀಗ ಮತ್ತೆ ಚಾಲ್ತಿಗೆ ಬಂದಿದೆ.

ಸದ್ಯ ಬೆಂಗಳೂರಿನಲ್ಲಿ 80 ಲಕ್ಷಕ್ಕೂ ಹೆಚ್ಚು ನೋಂದಣಿ ಪಡೆದ ವಾಹನಗಳಿದ್ದು, ಹೊರಗಿನಿಂದ ಬಂದು ಹೋಗುವ ವಾಹನಗಳ ಸಂಖ್ಯೆಯು ಲೆಕ್ಕಕ್ಕಿಲ್ಲ. ಜೊತೆಗೆ ಪ್ರತಿ ದಿನ ಬೆಂಗಳೂರಿನಲ್ಲಿ 2500ಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿ ಪಡೆದುಕೊಳ್ಳುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ 2020ಕ್ಕೆ ಒಂದು ಕೋಟಿ ತಲುಪಲಿದೆಯೆಂತೆ! (ಎನ್.ಬಿ)

Leave a Reply

comments

Related Articles

error: