
ಮೈಸೂರು
ಜಿಲ್ಲಾಧಿಕಾರಿಗಳ ಫೋನ್ ಇನ್ ಕಾರ್ಯಕ್ರಮದಲ್ಲಿ ಹರಿದು ಬಂದ ಸಮಸ್ಯೆಗಳ ಮಹಾಪೂರ
ಮೈಸೂರು,ನ.22:- ಸರ್ ನಮಗೆ ಬೀದಿ ದೀಪ ಇಲ್ಲರಿ, ಸರ್ ರಸ್ತೆಯಲ್ಲಿಯೇ ಗುಜರಿ ತಂದು ಹಾಕ್ತಾರೆ, ಸರ್ ರಸ್ತೆಯಲ್ಲಿಯೇ ಕಸ ಸುರಿತಾರೆ ಹೀಗೆ ಒಂದಾ ಎರಡಾ, ಸಮಸ್ಯೆಗಳ ಪಟ್ಟಿ ಜಿಲ್ಲಾಧಿಕಾರಿಗಳ ಮುಂದೆ ಒಂದಾದ ನಂತರ ಒಂದು ತೆರೆದುಕೊಂಡಿತ್ತು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ 1 ಗಂಟೆಗಳ ಕಾಲ ಸಾರ್ವಜನಿಕರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಪೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತಲ್ಲಿಂದ ಸಮಸ್ಯೆ ಗಳ ಮಹಾಪೂರವೇ ಹರಿದು ಬಂತು. ಹಲವರು ರಸ್ತೆ, ಚರಂಡಿ , ಮುಂತಾದ ಸಮಸ್ಯೆಗಳ ಬಗ್ಗೆ ಪರಿಹರಿಸುವಂತೆ ಮನವಿ ಮಾಡಿಕೊಂಡರು. ವರುಣಗ್ರಾಮದ ಸರ್ಕಾರಿ ಶಾಲೆಯ ಜಾಗದ ಬಗ್ಗೆ ಖಾತೆ ಮಾಡಿಕೊಡುವಂತೆ ವರುಣ ಗ್ರಾಮಸ್ಥರು ದೂರವಾಣಿ ಮೂಲಕ ಮನವಿ ಮಾಡಿಕೊಂಡರು. ಗ್ರಾಮಸ್ಥರ ಮನವಿ ಸ್ಪಂದಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಕೂಡಲೇ ಶಾಲೆಯ ಜಾಗದ ಬಗ್ಗೆ ಮಾಹಿತಿ ಪಡೆದು ಖಾತೆ ಮಾಡಿಸಿಕೊಡುವುದಾಗಿ ತಿಳಿಸಿದರು. ಕೆಲವರು ಕರೆ ಮಾಡಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ನಮಗೆ ಓಡಾಡಲು ಕಷ್ಟವಾಗುತ್ತಿದೆ ಎಂದು ದೂರನ್ನಿತ್ತರು. ರಾಮಕೃಷ್ಣನಗರದ ವ್ಯಕ್ತಿಯೋರ್ವರು ಕರೆ ಮಾಡಿ ನಮಗೆ ಬೀದಿ ದೀಪದ ಸಮಸ್ಯೆಯಿದೆ. ಬೀದಿ ದೀಪವಿಲ್ಲ ಹಾಕಿಸಿಕೊಡಿ ಎಂದಾಗ ಅಲ್ಲಿಯೇ ಇದ್ದ ಮಹಾನಗರಪಾಲಿಕೆಯ ಆಯುಕ್ತರಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ನರಸೀಪುರ ರಸ್ತೆಯಲ್ಲಿ ಗುಜರಿ ತಂದು ಹಾಕುತ್ತಿದ್ದಾರೆ ಇದಕ್ಕೆ ಕ್ರಮ ಕೈಗೊಳ್ಳಿ ಎಂದು ವ್ಯಕ್ತಿಯೋರ್ವರು ಕರೆ ಮಾಡಿ ಮನವಿ ಮಾಡಿದರು. ಹುಣಸೂರು ಕುಪ್ಪೆಗಾಲ ಏರಿ ಒಡೆದಿದೆ. ದುರಸ್ತಿ ಮಾಡಿಸಿ ಕೊಡಿ ಎಂದು ಕರೆ ಮಾಡಿ ಮನವಿ ಮಾಡಿದರು. ಲಷ್ಕರ್ ಮೊಹಲ್ಲಾ ದೊಡ್ಡಗುದ್ದಲಿ ಬಳಿ ತ್ಯಾಜ್ಯ ರಸ್ತೆಗೇ ಸುರಿತಾರೆ ಎಂದಾಗ ಮಹಾನಗರಪಾಲಿಕೆಯ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಕೆಲವು ಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿ ಇನ್ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಲ್ಲಿ ಕ್ರಮಕ್ಕೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್ , ಪಾಲಿಕೆ ಆಯುಕ್ತ ಕೆ.ಹೆಚ್ ಜಗದೀಶ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ಅಡಿಷನಲ್ ಎಸ್ಪಿ ಸ್ನೇಹ, ಮತ್ತಿತರ ಅಧಿಕಾರಿಗಳಿದ್ದರು. (ಕೆ.ಎಸ್,ಎಸ್.ಎಚ್)