ಕರ್ನಾಟಕ

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ಸಿಬಿಐನಲ್ಲಿ ಎಫ್ಐಆರ್ ದಾಖಲು

ಬೆಂಗಳೂರು,ನ.22-ಬೆಂಗಳೂರು ಟೆಕ್ಕಿ ಅಜಿತಾಬ್ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಸಿಬಿಐ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಳೆದ ಡಿಸೆಂಬರ್‌ 18 ರಂದು ಅಜಿತಾಬ್ ನಾಪತ್ತೆಯಾಗಿದ್ದ. ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು.

ಪೊಲೀಸರು 8 ತಂಡಗಳನ್ನು ರಚಿಸಿಕೊಂಡು ಹುಡುಕಾಟ ಪ್ರಾರಂಭಿಸಿದರು.  ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದರು. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಅಜಿತಾಬ್ ಸುಳಿವು ದೊರೆತಿರಲಿಲ್ಲ.

ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ನಂತರ ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಪಿಎಂಓ ಕಚೇರಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಅಜಿತಾಬ್ ಪ್ರಕರಣವನ್ನು ಆದ್ಯತೆ ಮೇಲೆ ತನಿಖೆ ನಡೆಸಬೇಕು ಎಂದು ಕುಟುಂಬ ಸದಸ್ಯರು ಪ್ರಧಾನಿ ಕಾರ್ಯಾಲಯದ ಮೊರೆ ಹೋಗಿದ್ದರು.

ಮೇ 13ರಂದು ಅಜಿತಾಬ್ ಪೋಷಕರು ಪ್ರಧಾನಿ ಕಾರ್ಯಾಲಯಕ್ಕೆ ಭೇಟಿ ನೀಡಿ ಉಳಿದ ರಾಜ್ಯಗಳೂ ಅಜಿತಾಬ್ ಪತ್ತೆ ವಿಚಾರದಲ್ಲಿ ಆಸಕ್ತಿ ತೋರಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ರೈಲ್ವೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಮೂರು ಮೃತದೇಹಗಳ ಗುರುತು ಹಿಡಿಯುವಂತೆ ಪೋಷಕರನ್ನು ಕರೆಸಿಕೊಂಡಿದ್ದರು. ಆದರೆ ಅದು ಅಜಿತಾಬ್ ಆಗಿರಲಿಲ್ಲ ಎಂದು ತಿಳಿದುಬಂದಿದೆ.

ಅಜಿತಾಬ್ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಐದು ವರ್ಷಹಳಿಂದ ಕೆಲಸ ಮಾಡುತ್ತಿದ್ದ, ತನ್ನ ಸಿಯಾಜ್ ಕಾರನ್ನು ಮಾರಾಟ ಮಾಡುವ ಕುರಿತು ಓಎಲ್‌ಎಕ್ಸ್‌ನಲ್ಲಿ ಮಾಹಿತಿ ಹಾಕಿದ್ದರು. ಓಎಲ್‌ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೋಗಿ ಬರುತ್ತಿದ್ದ. ಆದರೆ ಡಿ.18 ರಂದು ನಾಪತ್ತೆಯಾದ. ಒಎಲ್ ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು. (ಎಂ.ಎನ್)

Leave a Reply

comments

Related Articles

error: