ಮೈಸೂರು

ಮತದಾರರ ನೋಂದಣಿಗೆ ನವೆಂಬರ್ 23 ರಿಂದ 25ರ ವರೆಗೆ ವಿಶೇಷ ಆಂದೋಲನ : ಅಭಿರಾಮ್ ಜಿ.ಶಂಕರ್

ಮೈಸೂರು. ನ.22:-  ದೇಶಾದ್ಯಂತ ನಡೆಯುವ ಮತದಾರರ ವಿಶೇಷ ನೋಂದಣಿ ಆಂದೋಲನ ಮೈಸೂರು ಜಿಲ್ಲೆಯಲ್ಲೂ ಸಹ ನವೆಂಬರ್ 23, 24 ಹಾಗೂ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ತಿಳಿಸಿದ್ದಾರೆ.
2019ರ ಜನವರಿ 1ನೇ ತಾರೀಖಿಗೆ 18 ವರ್ಷ ತುಂಬುವ ಎಲ್ಲಾ ಯುವಕ ಯುವತಿಯರಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕೆಲವು ಕಾರಣಗಳಿಗೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಅಗತ್ಯವಿದ್ದರೆ ನಮೂನೆ -7ರಲ್ಲಿ ಅರ್ಜಿ ಸಲ್ಲಿಸಬೇಕು. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ-6ರಲ್ಲಿ ಅರ್ಜಿ ಕೊಡಬೇಕು. ಅದರೊಂದಿಗೆ ಒಂದು ಫೋಟೊ, ವಿಳಾಸ ದಾಖಲಾತಿ ಹಾಗೂ ವಯಸ್ಸಿನ ದಾಖಲಾತಿ ಇರಬೇಕು. ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದು, ಗುರುತಿನ ಚೀಟಿಯಲ್ಲಿ ತಿದ್ದುಪಡಿ ಬೇಕಿದ್ದರೆ, ನಮೂನೆ-8ರಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ತಿದ್ದುಪಡಿ ಬಗ್ಗೆ ದಾಖಲಾತಿ ಸಲ್ಲಿಸಬೇಕು.
ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಮತಗಟ್ಟೆಗೆ ವರ್ಗಾವಣೆಗೆ ನಮೂನೆ-8 ರಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಾಣಾಧಿಕಾರಿಗಳ ಕಚೇರಿ, ಮೈಸೂರು ಮಹಾನಗರ ಪಾಲಿಕೆ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರ್ ಅವರ ಕಛೇರಿ ಅಥವಾ ಆಯಾ ಮತಗಟ್ಟೆಗಳಲ್ಲಿ ಬೂತ್ ಲೆವಲ್ ಅಧಿಕಾರಿಗಳಿಗೆ ಸಲ್ಲಿಸುವುದು. ಅರ್ಜಿ ನಮೂನೆಗಳು ಆಯಾ ಕಚೇರಿಗಳಲ್ಲೇ ಸಿಗುತ್ತವೆ.
ಮೈಸೂರು ಜಿಲ್ಲೆಯ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೂ ಸಹ ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು.  ಇಲ್ಲದಿದ್ದಲ್ಲಿ ಹೊಸದಾಗಿ ಸೇರ್ಪಡೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ .ಜಿ. ಶಂಕರ್ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: