ಪ್ರಮುಖ ಸುದ್ದಿ

ಚುನಾವಣಾ ಪ್ರಚಾರದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬ್ಯುಸಿ : ಹಸಿರುನಿಶಾನೆ ತೋರಿದರಷ್ಟೇ ಸಂಪುಟ ವಿಸ್ತರಣೆ: ಡಾ.ಜಿ.ಪರಮೇಶ್ವರ್

ಮೈಸೂರು,ನ.23:- ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬ್ಯುಸಿಯಾಗಿದ್ದು, ಅವರು ಭೇಟಿಗೆ ಸಮಯವಕಾಶ ನೀಡಿ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡಿದರಷ್ಟೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಈ ತಿಂಗಳ ಅಂತ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ಸಚಿವ ಆಕಾಂಕ್ಷಿ ಶಾಸಕರುಗಳಿಗೆ ಪರಮೇಶ್ವರ್ ಅವರ ಹೇಳಿಕೆ ಮತ್ತೊಮ್ಮೆ ನಿರಾಸೆ ಯಾಗುವುದು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಜ್ಯಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ವೇಣು ಗೋಪಾಲ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಬೇಕಾಗಿದೆ. ಆದರೆ ರಾಹುಲ್ ಗಾಂಧಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿರತರಾಗಿರುವ ಹಿನ್ನಲೆಯಲ್ಲಿ ಅವರ ಭೇಟಿ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಅವಕಾಶ ಸಿಕ್ಕಿ ಅವರೊಂದಿಗೆ ಚರ್ಚೆ ನಡೆಸಿ ಅವರು ಸಂಪುಟ ವಿಸ್ತರಣೆಗೆ ಅನುಮತಿ ನೀಡಿದರೇ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ತಿಂಗಳಾಂತ್ಯದೊಳಗೆ ವಿಸ್ತರಣೆ ಮಾಡಬೇಕು ಎಂದು ನಾವು ಉತ್ಸುಕರಾಗಿದ್ದೇವೆ. ಆದರೆ ರಾಹುಲ್ ಗಾಂಧಿ ಅವರ ಭೇಟಿ ದೊರಕದ ಹಿನ್ನಲೆಯಲ್ಲಿ ಅದು ಸಾಧ್ಯವಾಗಿಲ್ಲ. ಈ ಸಂಬಂಧ ಅವರಿಂದ ಅನುಮತಿ ಪಡೆಯಬೇಕಾಗಿದೆ ಎಂದರು. ಕಳೆದ 6 ತಿಂಗಳಿನಿಂದ ಒಂದಿಲೊಂದು ನೆಪವೊಡ್ಡಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಂದೂಡಲಾಗುತ್ತಿದೆ. ಇದರಿಂದ ಸಚಿವ ಆಕಾಂಕ್ಷಿ ಶಾಸಕರುಗಳು ಅಸಮಾಧಾನಗೊಂಡು ಅತೃಪ್ತಿ ಹೊರಹಾಕಿದರು.

ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಅತೃಪ್ತಿ ಹಾಗೂ ಅಸಮಾಧಾನ ಪರಿಣಾಮ ಬೀರಬಹುದೆಂದು ಮುನ್ಸೂಚನೆ ಅರಿತ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕರು ಈ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದರು. ಇದಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕೂಡ ಧ್ವನಿ ಗೂಡಿಸಿದರು.

ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಒಂದು ವೇಳೆ ಸಂಪುಟ ವಿಸ್ತರಣೆ ಆಗುವುದಾದರೆ ಅದರ ಒಳಗಡೆ ಆಗಬೇಕು. ಇಲ್ಲದಿದ್ದರೇ ಅಧಿವೇಶನ, ಆ ಬಳಿಕ ಶೂನ್ಯ ಮಾಸ ಅಡ್ಡಿ ಬರಲಿದೆ. ಇದಾದ ನಂತರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವುದರಿಂದ ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: