ದೇಶಪ್ರಮುಖ ಸುದ್ದಿ

ಡಿಎಂಕೆ ಕಾರ್ಯಾಧ್ಯಕ್ಷರಾಗಿ ಎಂ.ಕೆ. ಸ್ಟಾಲಿನ್ ಆಯ್ಕೆ

ಚೆನ್ನೈ: ಡಿಎಂಕೆ ಕಾರ್ಯಾಧ್ಯಕ್ಷರಾಗಿ ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಡಿಎಂಕೆ ಪಕ್ಷದ ಖಜಾಂಚಿ ಮತ್ತು ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಎಂ.ಕೆ. ಸ್ಟಾಲಿನ್‍ ಅವರನ್ನು ಇಂದು ಸಭೆ ಸೇರಿದ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷಕ್ಕೆ ಸುದೀರ್ಘ ಕಾಲದಿಂದ ಅಧ್ಯಕ್ಷರೂ ಆಗಿರುವ 92 ವರ್ಷ ವಯಸ್ಸಿನ ಎಂ.ಕರುಣಾನಿಧಿ ಅವರು ತೀವ್ರ ಅನಾರೋಗ್ಯಕ್ಕೀಡಾಗಿ ಇತ್ತೀಚೆಗೆ ಆಸ್ಪತ್ರೆ ಸೇರಿದ್ದ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಪಕ್ಷದ 3 ಸಾವಿರ ಸದಸ್ಯರು ಸೇರಿದ್ದ ಈ ಸಭೆಯ ಅಧ್ಯಕ್ಷತೆಯನ್ನು ಡಿಎಂಕೆ ಪ್ರಧಾನ ಕಾರ್ಯದರ್ಶಿ ಅನ್ಬಳಗನ್ ಅವರು ವಹಿಸಿದ್ದರು. ಆದರೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿಯವರು ಈ ಸಭೆಗೆ ಹಾಜರಾಗಿರಲಿಲ್ಲ. ವೈದ್ಯರ ಸಲಹೆಯಂತೆ ಚೆನ್ನೈನ ತಮ್ಮ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿಯರಿಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ.

ಇದರೊಂದಿಗೆ ಕಳೆದ 7 ವರ್ಷದಿಂದ ಕರುಣಾನಿಧಿ ಕುಟುಂಬದಲ್ಲಿ ನಡೆಯುತ್ತಿದ್ದ ನಾಯಕತ್ವ ಕಾದಾಟಕ್ಕೆ ಒಂದು ಹಂತಕ್ಕೆ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.

ಜಯಲಲಿತಾ ನಿಧನದ ನಂತರ ಎಐಎಡಿಎಂಕೆಯಯಲ್ಲೂ ದಿನೇ ದಿನೇ ಬದಲಾವಣೆಗಳಾಗುತ್ತಿವೆ. ಇದೀಗ ಕರುಣಾನಿಧಿಯವರೂ ಅನಾರೋಗ್ಯ ಕಾರಣದಿಂದ ತೆರೆಮರೆಗೆ ಸರಿಯುತ್ತಿರುವ ಕಾರಣ ಜಯಲಲಿತಾ ನಿಧನದ ನಂತರ ತಮಿಳುನಾಡಿನಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಘಟಿಸುತ್ತಿವೆ.

Leave a Reply

comments

Related Articles

error: