
ಪ್ರಮುಖ ಸುದ್ದಿ
ತೊಣ್ಣೂರು ಕೆರೆ ಉತ್ಸವಕ್ಕೆ ಭರ್ಜರಿ ತಯಾರಿ
ರಾಜ್ಯ(ಮಂಡ್ಯ)ನ.23:- ಐತಿಹಾಸಿಕ ಪ್ರವಾಸಿಗರ ಕಣ್ಮನ ಸೆಳೆಯುವ ಹಾಗೂ ಆಕರ್ಷಿಸುವ ಅಚ್ಚುಮೆಚ್ಚಿನ ಪ್ರವಾಸಿಕ್ಷೇತ್ರ ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆ ಉತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
ಪಾಂಡವಪುರ ತಾಲೂಕಿನ ತೊಣ್ಣೂರುಕೆರೆ ನೋಡಲು ಇದೀಗ ಬಲು ಸುಂದರವಾಗಿದೆ. ಇದೇ ತಿಂಗಳು ನವೆಂಬರ್ 23, 24 ಹಾಗೂ 25 ಮೂರು ದಿನಗಳ ಕಾಲ ನಡೆಯುವ ತೊಣ್ಣೂರು ಕೆರೆ ಉತ್ಸವಕ್ಕೆ ಸಕಲ ಅದ್ದೂರಿ ಸಿದ್ದತೆ ನಡೆಯುತ್ತಿದೆ. ತೊಣ್ಣೂರು ಕೆರೆ ನೀರಿನ ಮೇಲೆ ವಾಟರ್ ಫ್ರೂಫ್ ಅರ್ಹತೆಯ ವಿಶೇಷ ವೇದಿಕೆ ನಿರ್ಮಾಣ, ದಡದಲ್ಲಿ ವಿಶೇಷ ದೀಪಾಲಂಕಾರ, ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ಮೂರು ದಿನಗಳ ಕಾಲ ನಡೆಯುವ ತೊಣ್ಣೂರು ಕೆರೆ ಉತ್ಸವವನ್ನು 23 ರಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿ ತೊಣ್ಣೂರು ಕೆರೆಗೆ ಬಾಗೀನ ಅರ್ಪಿಸಿ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ತೊಣ್ಣೂರು ಕೆರೆ ನೀರಿನ ಮೇಲೆ ಫ್ಲೋಡಿಂಗ್ ಡಾಕ್ ಅಂದ್ರೆ ನೀರಿನಲ್ಲಿ ತೇಲುವ ವಿಶೇಷ ವೇದಿಕೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜನಪ್ರತಿನಿಧಿಗಳು, ವಿಶೇಷ ಆಹ್ವಾನಿತರು ಆಸೀನರಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾಂಬೆ ತಂತ್ರಜ್ಞರಿಂದ ನೀರಿನಲ್ಲಿ ತೇಲುವ ವೇದಿಕೆ ನಿರ್ಮಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ 600 ಕೋಟಿರೂ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ ನೀಡಲಿದ್ದಾರೆ. ತೊಣ್ಣೂರು ಕೆರೆ ಉತ್ಸವದ ಸಕಲ ಸಿದ್ದತೆಯನ್ನು ಸಚಿವ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವೀಕ್ಷಿಸಿ ಪರಿಶೀಲಿಸಿದರು. ಉತ್ಸವದಲ್ಲಿ ರಾಜ್ಯ ಮಟ್ಟದ ವಿವಿಧ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತೊಣ್ಣೂರು ಕೆರೆ ಉತ್ಸವ ವೀಕ್ಷಣೆಗೆ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.
ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ, ಕಡಿಮೆ ದರವುಳ್ಳ ಆಹಾರ ಮೇಳ ವ್ಯವಸ್ಥೆ ಕಲ್ಪಿಸಲಾಗಿದೆ. (ಕೆ.ಎಸ್,ಎಸ್.ಎಚ್)