ಪ್ರಮುಖ ಸುದ್ದಿ

ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನವನ್ನು ತಪಾಸಣೆ ಮಾಡಿಸಿಕೊಂಡು ಪ್ರಮಾಣ ಪತ್ರವನ್ನು ಪಡೆದುಕೊಳ್ಳಿ : ಅಧೀಕ್ಷಕ ಪ್ರಸಾದ್

ರಾಜ್ಯ(ಮಂಡ್ಯ)ನ.23:- ಕೆ.ಆರ್.ಪೇಟೆ ಪಟ್ಟಣದಲ್ಲಿ ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧೀಕ್ಷಕ ಪ್ರಸಾದ್ ಮಾತನಾಡಿ ವಾಹನಗಳ ಚಾಲಕರು ತಮ್ಮ ವಾಹನಗಳಿಗೆ ಕಲಬೆರಕೆ ಇಂಧನವನ್ನು ಬಳಸಬಾರದು. ವಾಹನಗಳನ್ನು ಸದಾ ಸುಸ್ಥಿತಿಯಲ್ಲಿಡು ವಂತೆ ನೋಡಿಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನವನ್ನು ತಪಾಸಣೆ ಮಾಡಿಸಿಕೊಂಡು ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಕಪ್ಪು ಮತ್ತು ದಟ್ಟವಾದ ಹೊಗೆ ಬರುತ್ತಿದ್ದಲ್ಲಿ ತಕ್ಷಣ ಅಧಿಕೃತ ಮಾರಾಟಗಾರರು ಅಥವಾ ಸರ್ವೀಸ್ ಸೆಂಟರ್‍ಗಳಲ್ಲಿ ದುರಸ್ತಿ ಮಾಡಿಸಿಕೊಳ್ಳಬೇಕು. ಕಳಪೆ ದರ್ಜೆಯ ಇಂಜಿನ್ ಆಯಿಲ್ ಬಳಸಬಾರದು. ಸೈಲೆನ್ಸರ್‍ಗಳಲ್ಲಿ ಟ್ಯಾಂಪರ್ ಮಾಡಬಾರದು. ಕರ್ಕಶ ಶಬ್ದ ಬಾರದಂತೆ ನೋಡಿಕೊಳ್ಳಬೇಕು. ವಾಯು ಮಾಲಿನ್ಯ ಕಂಡು ಬಂದ ವಾಹನಗಳಿಗೆ 1989ರ ಮೋಟಾರು ವಾಹನ ಕಾಯಿದೆ ನಿಯಮ 115, 119, 120ರ ಪ್ರಕಾರ ಮೊದಲ ಬಾರಿ ಅಪರಾಧಕ್ಕೆ 1000 ರೂ, ಎರಡನೇ ಬಾರಿಗೆ 2000 ರೂ ದಂಡ ವಿಧಿಸಲಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ವಾಯು ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಪ್ರಸಾದ್ ಅವರು ವಾಹನಚಾಲಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರಿಗೆ ಇನ್ಸ್‍ಪೆಕ್ಟರ್ ಸಿ.ಎಸ್.ಸತೀಶ್ ಮಾತನಾಡಿ ವಾಹನ ಚಾಲಕರು ಕಡ್ಡಾಯವಾಗಿ ಸಾರಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ತಮ್ಮ ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಎಲ್ಲಾ ವಾಹನಗಳ ಚಾಲಕರು ಕಡ್ಡಾಯವಾಗಿ ಡಿ.ಎಲ್. ಮಾಡಿಸಿಕೊಳ್ಳಬೇಕು ಇಲ್ಲದಿದ್ದರೆ ಅಪಘಾತವಾದ ಸಂದರ್ಭದಲ್ಲಿ ವಿಮೆ ಮತ್ತಿತರರ ಸೌಲಭ್ಯಗಳು ಸಿಗದೇ ತೊಂದರೆಗೆ ಸಿಲುಕಬಹುದು. ಹಾಗಾಗಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವ ಮೂಲಕ ಸುರಕ್ಷ ಸಂಚಾರಕ್ಕೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ್, ಸಾರಿಗೆ ಡಿ.ಎಲ್. ಪ್ರತಿನಿಧಿಗಳಾದ ವಿಷ್ಣು, ಸಂಜಯ್, ಪಟ್ಟಣದ ಹಂಪಾ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ವಿಜಯ್‍ಹಂಪಾ, ನಂದಿ ಡ್ರೈವಿಂಗ್ ಸ್ಕೂಲ್ ಮಾಲೀಕ ನಂದೀಶ್, ಹಾಗೂ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: