ದೇಶಪ್ರಮುಖ ಸುದ್ದಿ

ರಾಜೀನಾಮೆಗೆ ಗೋವಾ ಸಿಎಂ ರೆಡಿ, ಆದ್ರೆ ಹೈಕಮಾಂಡ್ ಒಪ್ಪುತ್ತಿಲ್ಲವಂತೆ!

ಪಣಜಿ (ನ.23): ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ಆದರೆ ಅದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪುತ್ತಿಲ್ಲ ಎಂದು ಗೋವಾ ಕೃಷಿ ಸಚಿವ ವಿಜೈ ಸರ್ದೇಸಾಯಿ ಅವರು ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜೈ ಸರ್ದೇಸಾಯಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರೂ ಮನೋಹರ್ ಪರಿಕ್ಕರ್ ಅವರು ರಾಜೀನಾಮೆ ನೀಡದಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಪರಿಕ್ಕರ್ ಅವರು ರಾಜೀನಾಮೆ ನೀಡಲು ತುದಿಗಾಲಲ್ಲಿ ಕಾಯುತ್ತಿದ್ದರೂ ಹೈಕಮಾಂಡೇ ಅದಕ್ಕೆ ಅನುಮತಿ ನೀಡುತ್ತಿಲ್ಲ ಎಂಬ ವಿಷಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಗಣೇಶ ಚತುರ್ಥಿಯ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮನೋಹರ್ ಪರಿಕ್ಕರ್ ಅವರು, ಅನಾರೋಗ್ಯದ ಕಾರಣ ತಮಗೆ ಆಡಳಿತ ನಡೆಸುವುದು ಕಷ್ಟವಾಗುತ್ತಿದೆ ಎಂದೇ ತಮಗೆ ವಹಿಸಿದ್ದ ಹಲವು ಖಾತೆಗಳ ಜವಾಬ್ದಾರಿಯನ್ನು ಸಂಪುಟದ ಇತರ ಸಚಿವರ ಹೆಗಲಿಗೆ ಹಾಕಿದ್ದರು. ಅವರಿಗೆ ಆಡಳಿತ ನಡೆಸುವುದು ಕಷ್ಟವಾಗುತ್ತಿದ್ದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡದ ಹೊರತು ರಾಜೀನಾಮೆ ನೀಡುವುದಕ್ಕೆ ಸಾಧ್ಯವಿಲ್ಲದ ಕಾರಣ ಅವರು ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಸರ್ದೇಸಾಯಿ ಹೇಳಿದ್ದಾರೆ.

ಈ ವಿಚಾರ ಹೊರಬೀಳುತ್ತಿದ್ದಂತೆಯೇ “ಮುಖ್ಯಮಂತ್ರಿಗಳು ಅನಾರೋಗ್ಯಕ್ಕೀಡಾಗಿರುವುದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ” ಎಂದು ನಾವು ಹಲವು ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ಚಿಕಿತ್ಸೆಗೆಂದು ಆಗಾಗ ಸಿಎಂ ಗೈರಾಗಬೇಕಾದ ಕಾರಣ ಕೆಲಸಗಳು ಹಿಂದೆ ಬೀಳುತ್ತಿವೆ ಎಂದು ಹೇಳಿದರೂ ಬಿಜೆಪಿ ಹೈಕಮಾಂಡ್ ಗಂಭಿರವಾಗಿ ತೆಗೆದುಕೊಳ್ಳುತ್ತಿಲ್ಲ” ಎಂದು ಇನ್ನೋರ್ವ ಶಾಸಕ ಮತ್ತು ಕಂದಾಯ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ.

ಮನೋಹರ್ ಪರಿಕ್ಕರ್ ಅವರ ರಾಜೀನಾಮೆಗೆ ಆಗ್ರಹಿಸಿ ನ.21ರಂದು ಅವರ ಮನೆ ಮುಂದೆ ಹಲವು ಎನ್‍ಜಿಒಗಳು, ಶಿವಸೇನೆ, ಎನ್.ಸಿ.ಪಿ, ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಧರಣಿ ನಡೆಸಿದ್ದವು. 48 ಗಂಟೆಗಳ ಒಳಗೆ ಪರಿಕ್ಕರ್ ಅವರು ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದವು.

ಹೈಕಮಾಂಡ್ ಒಪ್ಪುತ್ತಿಲ್ಲವೇಕೆ?

ಪರಿಕ್ಕರ್ ಅವರ ಆಡಳಿತದ ಬಗ್ಗೆ ಗೋವಾದ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಎಷ್ಟೋ ಕಾಲದ ನಂತರ ಗೋವಾದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಪರಿಕ್ಕರ್ ಅವರ ಉತ್ತರಾಧಿಕಾರಿಯಾಗಿ ಸಮರ್ಥ ನಾಯಕರನ್ನು ಹುಡುಕುವುದಕ್ಕೆ ಹೈಕಮಾಂಡ್ ಗೆ ಸಾಧ್ಯವಾಗುತ್ತಿಲ್ಲ. ಕಾರಣ, ಪರಿಕ್ಕರ್ ಅವರು ಮುಂದುವರಿಯುವಷ್ಟು ದಿನ ಅವರೇ ಇರಲಿ ಎಂಬ ಅಭಿಪ್ರಾಯ ಬಿಜೆಪಿಯದ್ದು.

ಪರಿಕ್ಕರ್ ರಾಜೀನಾಮೆಗೆ ವಿಪಕ್ಷಗಳಿಂದ ಒತ್ತಡ ಬರುತ್ತಿದೆಯೇ ವಿನಃ ಸಾರ್ವಜನಿಕ ವಲಯದಲ್ಲಿ ಪರಿಕ್ಕರ್ ಅವರ ಬಗ್ಗೆ ಅನುಕಂಪ ಮತ್ತು ಅಭಿಮಾನವಿದೆ. ಅದನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ ಎನ್ನಲಾಗಿದೆ. ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಮನೋಹರ್ ಪರಿಕ್ಕರ್ ಅವರು ಗೋವಾದ ಜನಪ್ರಿಯ ಮುಖ್ಯಮಂತ್ರಿ. ಆದರೆ ಕಳೆದ ವರ್ಷ ಪ್ಯಾಂಕ್ರಿಯಾಸ್ ಸಂಬಂಧೀ ಕಾಯಿಲೆಗೆ ತುತ್ತಾದ ಅವರ ಆರೋಗ್ಯ ಹದಗೆಟ್ಟಿದೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. (ಎನ್.ಬಿ)

Leave a Reply

comments

Related Articles

error: