ಮೈಸೂರು

ಕನ್ನಡ ಸಾಹಿತಿಗಳ ನೆನಪ ಕಡಲಲ್ಲೊಂದು ಭಾವಯಾನ – ಕನ್ನಡ ಹಬ್ಬ 2018

ಮೈಸೂರು,ನ.24:- ಮೈಸೂರು ನಗರದ ಸಿದ್ಧಾರ್ಥನಗರದಲ್ಲಿರುವ ಗೀತಾ ಶಿಶು ಶಿಕ್ಷಣ ಸಂಘದ ಆಶ್ರಯದ ಬದರಿಪ್ರಸಾದ್‍ಜಿ ಪದವಿ ಪೂರ್ವ ಕಾಲೇಜು ಹಾಗೂ ಸಿಂಹ ಸುಬ್ಬಮಹಾಲಕ್ಷ್ಮಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ಇತ್ತೀಚೆಗೆ 63ನೇ ಕನ್ನಡ ರಾಜ್ಯೋತ್ಸವವನ್ನು “ಕನ್ನಡ ಸಾಹಿತಿಗಳ ನೆನಪ ಕಡಲಲ್ಲೊಂದು ಭಾವಯಾನ” ಶೀರ್ಷಿಕೆಯಡಿ ಆಚರಿಸಲಾಯಿತು.

ಕಾರ್ಯಕ್ರಮವು ಗೀತಾ ಶಿಶು ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿಗಳಾದ ಮಾತೃಶ್ರೀ ವನಜ ಬಿ ಪಂಡಿತ್ ಅವರ ಆಶೀರ್ವಾದದೊಂದಿಗೆ ದೀಪ ಬೆಳಗುವುದರ ಮೂಲಕ ಪ್ರಾರಂಭವಾಯಿತು.  ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ  ಡಾ. ಸಿ. ಆಂಥೋಣಿ ಪೌಲ್ ರಾಜ್ ಮಾತನಾಡಿ ಕನ್ನಡ ಭಾಷೆಯ ಔದಾರ್ಯತೆ, ಹಿರಿಮೆ, ಸ್ಥಾನಮಾನ ಹಾಗೂ ಕೊಡುಗೆಗಳ ಬಗ್ಗೆ ವಿವರಿಸುತ್ತಾ ಕನ್ನಡ ಭಾಷೆ ಸಮೃದ್ಧವಾದ ದ್ರಾವಿಡ ಭಾಷೆ.  ಇದು ವಿಶ್ವ ಲಿಪಿಗಳ ರಾಣಿ, ಇತರ ಭಾಷೆಗಳಿಗಿಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಹೊಂದಿದ ಏಕೈಕ ಭಾಷೆ ಕನ್ನಡ ಎಂದರು, ಪ್ರಶಸ್ತಿಗಳ ಸುರಿಮಳೆಯನ್ನೇ ಸುರಿಸಿದ ಕನ್ನಡದ ಹಿರಿಮೆ, ಸಿರಿವಂತಿಕೆಯ ಬಗ್ಗೆ ಕೊಂಡಾಡಿದರು.  ಕನ್ನಡ ಭಾಷೆ ಅತಿ ಪ್ರಾಚೀನತೆಯನ್ನು ಹೊಂದಿದ ಭಾಷೆಯಾಗಿದ್ದು, ಅದು ಹಿಮಾಲಯದೆತ್ತರಕ್ಕೆ ಬೆಳೆದಿದೆ.  ಹಾಗಾಗಿ ಅದನ್ನು ಮತ್ತೆ ಬೆಳೆಸಬೇಕಾಗಿಲ್ಲ, ಹೆಚ್ಚು ಹೆಚ್ಚು ಬಳಸಬೇಕಾಗಿದೆ ಎಂಬ ಕಿವಿಮಾತನ್ನು ಹೇಳಿದರು. ಈ ಕನ್ನಡದ ಮಣ್ಣಿನಲ್ಲಿ ವಾಸಿಸುವ ಪ್ರತಿಯೊಬ್ಬರು ಅನ್ಯಭಾಷಾ ವ್ಯಾಮೋಹಕ್ಕೆ ಒಳಗಾಗದೆ, ಕನ್ನಡವನ್ನೇ ಹೆಚ್ಚಾಗಿ ಬಳಸುವುದೇ ಕನ್ನಡ ಭಾಷೆಗೆ ನೀಡುವ ಅಮೂಲ್ಯ ಕೊಡುಗೆಯೆಂದು ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತು ತಿಳಿಸಿದರು.

ಪರಭಾಷಾ ವ್ಯಾಮೋಹಿಗಳಿಗೆ ಕನ್ನಡ ಕೇವಲ ನವೆಂಬರ್ ಒನ್ ಅಲ್ಲ ಅದು ಎಂದೆಂದಿಗೂ ನಂಬರ್ ಒನ್ ಎಂಬ ಕಿವಿಮಾತು ಹೇಳಿದರು.  ಕನ್ನಡ ಭಾಷೆಯನ್ನು ಕಣ್ಣು ಮತ್ತು ಚರ್ಮಕ್ಕೆ ಹೋಲಿಸಿ ಪರಭಾಷೆಯನ್ನು ಕ್ರಮವಾಗಿ ಕನ್ನಡಕ ಮತ್ತು ಶರ್ಟ್‍ಗೆ ಹೋಲಿಸಿ ತಮ್ಮ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸಿದರು. ಕನ್ನಡವನ್ನು ಕನ್ನಡ ನಾಡಿನ ಡಮರುಗ ಎನ್ನುವುದನ್ನು ಸುಂದರವಾದ ಗೀತೆಯೊಂದಿಗೆ ಸಮರ್ಥಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೀತಾ ಶಿಶು ಶಿಕ್ಷಣ ಸಂಘದ ಸದಸ್ಯರು ಮತ್ತು ಸಂಯೋಜಕರಾದ ಬಿ.ಕೆ. ನಟರಾಜ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜೀವನದ ಪ್ರಾಮುಖ್ಯತೆ ಹಾಗೂ ಭಾಷಾ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭ  ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ರವಿರಾಜ ಮತ್ತಿತರರು  ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: