ಮೈಸೂರು

ಮೃಗಾಲಯಕ್ಕೆ ಅರಣ್ಯ ಸಚಿವರ ಭೇಟಿ: ಅಧಿಕಾರಿಗಳಿಂದ ಸಂಪೂರ್ಣ ವಿವರ ಕೇಳಿದ ಸಚಿವರು

zoo-web-3ಮೃಗಾಲಯದ ಪಕ್ಷಿಗಳಿಗೆ ಮಾರಕ ರೋಗ ಪತ್ತೆ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಅರಣ್ಯ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃಗಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎನ್ನುವ ಮಾಹಿತಿಯನ್ನು ಸಚಿವರಿಗೆ ಮೃಗಾಲಯದ ಆಡಳಿತ ಮಂಡಳಿ ತಿಳಿಸಿತ್ತು.

ಬುಧವಾರ ಭೇಟಿ ನೀಡಿದ ಸಚಿವರಿಗೆ ಮೃಗಾಲಯದ ನಿರ್ದೇಶಕಿ ಕಮಲಾಕರಿಕಾಳನ್ ಮಾಹಿತಿ ನೀಡಿದರು. ಪ್ರಾಣಿಗಳ ಆರೋಗ್ಯ ಸ್ಥಿತಿಗತಿ ಹಾಗೂ ಕೈಗೊಂಡ ಕ್ರಮಗಳ ಕುರಿತೂ ಸಚಿವರಿಗೆ ಮಾಹಿತಿ ನೀಡಲಾಗಿದ್ದು, ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ.

ಏತನ್ಮಧ್ಯೆ ಮೈಸೂರು ಮೃಗಾಲಯದಲ್ಲಿ ಮಾರಕ ರೋಗ ಪತ್ತೆ ಹಿನ್ನೆಲೆಯಲ್ಲಿ ಮೃಗಾಲಯದ ಒಳ ಆವರಣದಲ್ಲಿ  ವಿರ್ಕಾನ್ ಎಸ್ ಔಷಧಿ ಸಿಂಪಡನೆ ಕಾರ್ಯ ಮೃಗಾಲಯದ ಸಿಬ್ಬಂದಿಗಳಿಂದ ನಡೆಯುತ್ತಿದೆ.

ಕಳೆದ ತಿಂಗಳು ನ.28 ರಿಂದಲೇ ಔಷಧಿ ಸಿಂಪಡಿಸುವ ಕಾರ್ಯ ನಡೆಯುತ್ತಿದ್ದು, ಮೃಗಾಲಯದ ಗಿಡ, ಮರ ಸೇರಿದಂತೆ ಎಲ್ಲ ಕಡೆ  ಔಷಧಿ ಸಿಂಪಡನೆ ನಡೆಯುತ್ತಿದೆ.

ಜನವರಿ ನಾಲ್ಕರಿಂದ ಮೃಗಾಲಯಕ್ಕೆ ರಜೆ ಘೋಷಿಸಲಾಗಿದ್ದು, ಮೃಗಾಲಯದ ಎಲ್ಲ ಸಿಬ್ಬಂದಿಗಳಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗಳಿಗೆ ಆ್ಯಂಟಿ ಬಯೋಟಿಕ್ ಮಾತ್ರೆ ನೀಡಲಾಗಿದೆ. ಮೃಗಾಲಯದಲ್ಲಿ ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಿದ್ದು, ಈ ಹಿಂದೆ ಅಂದರೆ ಡಿ.25 ರಂದು 1 ಸ್ಪಾಟ್ ಬಿಲ್ಡ್ ಪೆಲಿಕಾನ್, 3 ಗ್ರೇಲಾಗ್ ಗೂಸ್ ಮೃತಪಟ್ಟಿದ್ದವು. ಈ ವೇಳೆಯೇ ಪಕ್ಷಿಗಳ ಮಾದರಿಯನ್ನು ಬೆಂಗಳೂರಿನ ಆ್ಯನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯೋಲಜಿಕಲ್ ಲ್ಯಾಬ್’ಗೆ ಕಳುಹಿಸಲಾಗಿತ್ತು. ಜ.3ರಂದು ಮೃಗಾಲಯಕ್ಕೆ ಬಂದ ವರದಿಯಲ್ಲಿ ಏವಿಯನ್ ಇನ್ಪ್ಲೋಜಾ(ಎಚ್5ಎನ್8) ಇರುವುದನ್ನು ಖಚಿತಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ಕರಿಕಾಳನ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಮೃಗಾಲಯ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೇ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಅವರು ಇಲ್ಲದಿರುವ ಕಾರಣ, ಫೋನ್ ಹಾಗೂ ವಾಟ್ಸ್’ಅಪ್ ಮುಖಾಂತರ ಮಾಹಿತಿ ರವಾನಿಸಲಾಗಿದೆ ಎಂದು ಸ್ಪಷ್ಟನೆ‌ ನೀಡಿದ್ದಾರೆ. ಮಾತ್ರವಲ್ಲ ಮೃಗಾಲಯದ 1435 ಪ್ರಾಣಿ ಹಾಗೂ ಪಕ್ಷಿಗಳನ್ನು ಕ್ಷೇಮವಾಗಿ ನೋಡಿಕೊಳ್ಳುತ್ತೇವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ವೈದ್ಯ ಸುರೇಶ್ ಮಾತನಾಡಿ, ಇದೊಂದು ಗಾಳಿಯ ಮೂಲಕ ಹರಡುವ ರೋಗವಾಗಿದ್ದು, ಹೆಚ್ಚಿನದಾಗಿ ಪಕ್ಷಿಗಳಿಗೆ ಬಹುಬೇಗ ಹರಡುತ್ತದೆ. ಈ ಹಿನ್ನಲೆಯಲ್ಲಿ ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಭೋಪಾಲ್’ನ ನ್ಯಾಷನಲ್ ಇನ್ಸ್’ಟಿಟ್ಯೂಟ್ ಲ್ಯಾಬೋರೇಟರಿಗೆ ಪಕ್ಷಿಗಳ ಹಾಗೂ ಇತರೆ ಲ್ಯಾಬ್’ನಿಂದ ಬಂದ ವರದಿಯನ್ನು ಕಳುಹಿಸಲಾಗಿದೆ. ಸದ್ಯ ಇದರಿಂದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಸೂಕ್ಷ್ಮ ಸ್ವಭಾವದ ಜನರಿಗೆ ಈ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಒಂದು ತಿಂಗಳ ಕಾಲ ಮೃಗಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದರು.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮಾತನಾಡಿ, ನಮಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಮೃಗಾಲಯಕ್ಕೆ ರಜೆ ಎಂದು ಗೊತ್ತಾಯಿತು. ಅಲ್ಲಿಯವರೆಗೂ ನನಗೆ ಯಾರೂ ಮಾಹಿತಿ ನೀಡಿಲ್ಲ ಎಂದರು. ಈ ಕುರಿತಂತೆ ಕಮಲ ಅವರು ನನ್ನ ಬಳಿ ಕರೆ ಮಾಡಿದ್ದಕ್ಕೆ ಹಾಗೂ ವಾಟ್ಸ್’ಅಪ್ ಸಂದೇಶ ಇದೆ ಎಂದರು.

Leave a Reply

comments

Related Articles

error: