
ಪ್ರಮುಖ ಸುದ್ದಿ
ಸಿಎನ್ಸಿಯಿಂದ ಪುತ್ತರಿ ನಮ್ಮೆ ಆಚರಣೆ
ರಾಜ್ಯ(ಮಡಿಕೇರಿ) ನ.24 :- ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಪುತ್ತರಿ ನಮ್ಮೆ ಆಚರಣೆ ಶುಕ್ರವಾರ ಸಾರ್ವತ್ರಿಕವಾಗಿ ನಡೆಯಿತು. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರ ನೇತೃತ್ವದಲ್ಲಿ ಕುಶಾಲನಗರ ಸಮೀಪ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪನವರ ಗದ್ದೆಯಲ್ಲಿ ಸಾಮೂಹಿಕ ಕದಿರು ತೆಗೆಯುವ ಮೂಲಕ ಸಾಂಪ್ರದಾಯಿಕವಾಗಿ ಆಚರಣೆ ನಡೆಯಿತು.
ಮನೆಯ ನೆಲ್ಲಕ್ಕಿ ಅಡಿಯಲ್ಲಿ 5 ಬಗೆಯ ಮರದ ಎಲೆಗಳಿಂದ ನೆರೆ ಕಟ್ಟಿದ ನಂತರ ಗುರುಕಾರಣರಿಗೆ ನೈವೇದ್ಯ ಅರ್ಪಿಸಿ ನಮನ ಸಲ್ಲಿಸಿ ಮೆರವಣಿಗೆಯಲ್ಲಿ ತೆರಳಿದ ಸಿಎನ್ಸಿ ಸದಸ್ಯರುಗಳು ಸಾಂಪ್ರದಾಯಿಕ ಕೊಡವ ಓಲಗದೊಂದಿಗೆ ಗದ್ದೆಗೆ ತೆರಳಿದರು. ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಸಕಲ ವಿಧಿವಿಧಾನಗಳೊಂದಿಗೆ “ಪೊಲಿ ಪೊಲಿಯೆ ದೇವಾ ಪೊಲಿಯೇ ಬಾ” ಉದ್ಗಾರದೊಂದಿಗೆ ಕದಿರು ತೆಗೆದರು.
ಈ ಸಂದರ್ಭ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಸಿಎನ್ಸಿ ಸದಸ್ಯರು ದೇವರಿಗೆ ನಮಿಸಿ ಕದಿರಿನೊಂದಿಗೆ ಮೆರವಣಿಗೆ ತೆರಳಿ ಕಣದಲ್ಲಿ ಕದಿರನ್ನು ಇಟ್ಟು ಅಲ್ಲಿ ಪರೆಯಕಳಿ, ಕೋಲಾಟ, ವಾಲಗತ್ತಾಟ್, ದುಡಿಕೊಟ್ಟ್ ಪಾಟ್ ಕಾರ್ಯಕ್ರಮಗಳು ನಡೆದವು. ನಂತರ ಕದಿರನ್ನು ನೆಲ್ಲಕ್ಕಿಯಡಿಯಲ್ಲಿಟ್ಟು ದೇವರಿಗೆ ಪ್ರಾರ್ಥಿಸಲಾಯಿತು.
ಕದಿರು ವಿತರಣೆಯೊಂದಿಗೆ ಮನೆಯಲ್ಲಿ ಪ್ರಮುಖ ಭಾಗಗಳಾದ ಮುಖ್ಯದ್ವಾರ, ಕಣಜ, ಅಡುಗೆಮನೆ, ನೀರಿನ ಬಾವಿ, ಕೊಟ್ಟಿಗೆ, ವಾಹನಗಳು ಮತ್ತಿತರ ಜಾಗಗಳಲ್ಲಿ ಕದಿರು ಕಟ್ಟಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಕೊಡವ ಪದ್ಧತಿಯ ಸಾಂಪ್ರದಾಯಿಕ ಅಡುಗೆಯೊಂದಿಗೆ ಸಹಭೋಜನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಾಚಪ್ಪ, ಹುತ್ತರಿ ಅಂಗವಾಗಿ ಕೊಡಗು ಜಿಲ್ಲೆಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಮುಂದಿನ ಹುತ್ತರಿಯಿಂದ ರಾಜ್ಯಮಟ್ಟದ ರಜೆ ಘೋಷಣೆಗೆ ಸರಕಾರ ಕ್ರಮಕೈಗೊಳ್ಳಬೇಕಿದೆ ಎಂದರು ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ಥರಾದವರಿಗೆ ಹರಿದು ಬಂದ ಪರಿಹಾರ ನಿಧಿ ವ್ಯಾಪಕ ಪ್ರಮಾಣದಲ್ಲಿ ದುರುಪಯೋಗಗೊಂಡಿದೆ. ಇದೀಗ ಸಂತ್ರಸ್ಥರ ಕಲ್ಯಾಣಕ್ಕಾಗಿ ಬಿಡುಗಡೆಗೊಂಡ ರಾಜ್ಯ ಹಾಗೂ ಕೇಂದ್ರದ ಅನುದಾನವನ್ನು ಇತರೆಡೆಗಳಿಗೆ ಬಳಸುವ ಹುನ್ನಾರ ನಡೆಯುತ್ತಿದ್ದು ಸಂಪೂರ್ಣ ಅನುದಾನ ಕೊಡಗು ಜಿಲ್ಲೆಗೆ ಬಳಕೆಯಾಗಬೇಕಿದೆ ಎಂದು ಅವರು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಸಿಎನ್ಸಿ ಹೋರಾಟ ನಿರಂತರ ಸಾಗಲಿದೆ ಎಂದರು.
ಈ ಸಂದರ್ಭ ಸಿಎನ್ಸಿ ಪ್ರಮುಖರಾದ ನಂದಿನೆರವಂಡ ಉತ್ತಪ್ಪ, ವಿಜು, ಬೀನಾ, ಅಪ್ಪಣ್ಣ, ರೇಖಾ, ನಿಶಾ, ಶಶಾಂಕ್, ಅಪ್ಪಯ್ಯ, ಚೋಂದು, ದಿನೇಶ್, ಸುಮಿ, ಕಲಿಯಂಡ ಪ್ರಕಾಶ್, ಪುಲ್ಲೇರ ಬೋಪಯ್ಯ, ಕನ್ನಿಕೆ, ಚೆಂಬಂಡ ಜನತ್, ಅರೆಯಡ ಗಿರೀಶ್, ಅಪ್ಪಾರಂಡ ಪ್ರಕಾಶ್, ಅಜ್ಜೆಟ್ಟಿರ ರಾಣಿ, ಅಯಿಲಪಂಡ ಮಿಟ್ಟು, ಚಂಡಿರ ರಾಜ, ಕಾಂಡೇರ ಸುರೇಶ್, ಕಿರಿಯಮಾಡ ಶಿರಿನ್, ಅಜ್ಜಿಕುಟ್ಟಿರ ಲೋಕೇಶ್, ಅಂಚೆಟಿರ ಶಾಂತಿ, ಪೊನ್ನಪ್ಪ, ನಿತಿನ್, ಅಯಿಲಪಂಡ ರಂಜನ್, ಪಾಸುರ ಚಂಗಪ್ಪ, ಮಣ್ಣಂಡ ಕಾರ್ಯಪ್ಪ, ಅರೆಯಡ ಸಾವನ್, ಮಣವಟ್ಟಿರ ಕವಿತಾ, ಸೋಮಯ್ಯ ಮತ್ತಿತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)