ಪ್ರಮುಖ ಸುದ್ದಿ

ಜಾನುವಾರು ಗಣತಿ ನಿಖರ ಮಾಹಿತಿ ಸಂಗ್ರಹ : ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ

ರಾಜ್ಯ(ಮಡಿಕೇರಿ) ನ.24 : – ಇಪ್ಪತ್ತನೇ ಜಾನುವಾರು ಗಣತಿಯನ್ನು ವ್ಯವಸ್ಥಿತವಾಗಿ ನಡೆಸಿ ಪ್ರಗತಿ ಸಾಧಿಸುವಂತೆ ಪಶುಪಾಲನೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಜಾನುವಾರು ಗಣತಿ ಕಾರ್ಯಕ್ಕೆ ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಇತರೆ ಇಲಾಖೆಗಳಿಂದ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಈ ಅಧಿಕಾರಿ, ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಡಾ.ತಮ್ಮಯ್ಯ ಅವರು 20ನೇ ಜಾನುವಾರು ಗಣತಿಯು ಈಗಾಗಲೇ ಆರಂಭವಾಗಿದ್ದು, ಡಿಸೆಂಬರ್, 31 ರವರೆಗೆ ನಡೆಯಲಿದೆ. ಆ ನಿಟ್ಟಿನಲ್ಲಿ ಪ್ರಥಮವಾಗಿ ರಾಷ್ಟ್ರಾದ್ಯಂತ ಟ್ಯಾಬ್ಲೆಟ್ ಮತ್ತು ವೆಬ್ ಆಧಾರಿತ ತಂತ್ರಾಂಶ ಮೂಲಕ ಕೈಗೊಳ್ಳಲಾಗುತ್ತದೆ. ಸಾಫ್ಟ್‍ವೇರ್ ಆಧಾರಿತ ಜಾನುವಾರು ಗಣತಿ ಆಗಿರುವುದರಿಂದ ಆನ್‍ಲೈನ್‍ನಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಜಾನುವಾರು ಗಣತಿ ಸಂಬಂಧಿಸಿದಂತೆ 56 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 11 ಮೇಲ್ವಿಚಾರಕರು, ಮೂವರು ಪರಿಶೀಲನಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಾನುವಾರು ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಯ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಮೊಲ, ಆನೆ ಕುಕ್ಕುಟಗಳಾದ ಕೋಳಿ, ಪಶುಪಾಲನೆಯಲ್ಲಿ ಉಪಯೋಗಿಸುವ ಉಪಕರಣಗಳಾದ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಯಂತ್ರ ಬಗ್ಗೆ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು ರೈತಾಪಿ ಸಮುದಾಯಕ್ಕೆ ಪಶು ಸಂಗೋಪನೆ ಒಂದು ಪ್ರಮುಖ ಚಟುವಟಿಕೆಯಾಗಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ಪಶು ಸಂಪತ್ತು ಪ್ರಮುಖ ಪಾತ್ರವಾಗಿರುತ್ತದೆ ಎಂದು ಡಾ.ತಮ್ಮಯ್ಯ ಅವರು ಮಾಹಿತಿ ನೀಡಿದರು. ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯ, ಪೌರಾಯುಕ್ತರಾದ ಎಂ.ಎಲ್.ರಮೇಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮಿಲನ ಭರತ್ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: