ಪ್ರಮುಖ ಸುದ್ದಿ

ಕೊಡಗು ಕುರುಬ ಸಂಘದಿಂದ ಕನಕ ಜಯಂತಿ ಬಹಿಷ್ಕಾರ

ರಾಜ್ಯ(ಮಡಿಕೇರಿ)ನ.24:- ಕೊಡಗಿನಲ್ಲಿರುವ ಕುರುಬ ಜನಾಂಗವನ್ನು ಆಡಳಿತ ವ್ಯವಸ್ಥೆ ನಿರಂತರವಾಗಿ ಕಡೆಗಣಿಸುತ್ತಾ ಬಂದಿರುವುದರಿಂದ ನ.26 ರಂದು ಜಿಲ್ಲಾಡಳಿತದ ವತಿಯಿಂದ ನಡೆಯುವ ಕನಕ ಜಯಂತಿಯನ್ನು ಬಹಿಷ್ಕರಿಸುವುದಾಗಿ ಕೊಡಗು ಜಿಲ್ಲಾ ಕುರುಬ ಸಂಘ ತಿಳಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ಮಹೇಶ ಕನಕ ಜಯಂತಿ ಬಹಿಷ್ಕಾರದ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಮುನ್ಸೂಚನೆ ನೀಡಲಾಗುವುದು, ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕುರುಬ ಜನಾಂಗದ ಸ್ಥಿತಿ, ಗತಿ ಹೀನಾಯವಾಗಿದ್ದು, ವಾಸಿಸಲು ಸ್ವಂತ ಮನೆಯಿಲ್ಲದ ಅನೇಕ ಕುಟುಂಬಗಳಿವೆ. ಬಹುತೇಕರು ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದು, ಈ ಜನಾಂಗವನ್ನು ಪರಿಶಿಷ್ಟ ಪಂಗಡದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪಟ್ಟಿಗೆ ಸೇರಿಸಿದ್ದರು ಇಲ್ಲಿಯವರೆಗೆ ಸರಕಾರದ ಯಾವುದೇ ಸೌಲಭ್ಯಗಳು ಲಭಿಸಿಲ್ಲ.

ಕಳೆದ ಬಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜನಾಂಗಕ್ಕೆ ಬಂದ ಅನುದಾನವನ್ನು ದಿಡ್ಡಹಳ್ಳಿ ನಿರಾಶ್ರಿತರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಹೇಶ ಆರೋಪಿಸಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಸಮುದಾಯ ಭವನ ನಿರ್ಮಾಣ ಮಾಡಲು ಸಂಘದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸ್ಥಳೀಯ ಶಾಸಕರು ಹಾಗೂ ಹಿಂದಿನ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಖಾತೆ ಸಚಿವರು ಕುಶಾಲನಗರ ಹೋಬಳಿ ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲು ಸರ್ವೇ ನಂ. 5/1ಪಿ2 0.25 ಸೆಂಟ್ ಜಾಗವನ್ನು ಮಂಜೂರು ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಅಲ್ಲದೆ 2017 ಆಗಸ್ಟ್ 28 ರಂದು ಆಗಿನ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಜಾಗ ಮಂಜೂರು ಮಾಡಲು ಆದೇಶಿಸಿದ್ದರು.

2018 ಜನವರಿ 9 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಸಂಘದ ಮನವಿಗೆ ಸ್ಪಂದಿಸಿದ ಅವರು ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಜಿಲ್ಲಾಡಳಿತ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲವೆಂದು ಮಹೇಶ ಆರೋಪಿಸಿದ್ದಾರೆ.

ಆಡಳಿತ ವ್ಯವಸ್ಥೆ ನಿರಂತರವಾಗಿ ಕುರುಬ ಜನಾಂಗವನ್ನು ನಿರ್ಲಕ್ಷಿಸುತ್ತಲೇ ಬಂದಿರುವುದರಿಂದ ಈ ಬಾರಿಯ ಕನಕ ಜಯಂತಿಯನ್ನು ಕುರುಬ ಸಮುದಾಯ ಬಹಿಷ್ಕರಿಸಲಿದೆ ಎಂದು ಎಂದು ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: