ಕರ್ನಾಟಕದೇಶಮೈಸೂರು

ಕಲಿಯುಗ ಕರ್ಣ, ನಟ-ಮಾಜಿ ಸಚಿವ ಅಂಬರೀಶ್ ನಿಧನ!

ಶೋಕ ಸಾಗರದಲ್ಲಿ ಮುಳುಗಿದ ಅಭಿಮಾನಿಗಳು, ಕಂಬನಿ ಮಿಡಿದ ಚಿತ್ರರಂಗ

ಬೆಂಗಳೂರು (ನ.25): ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರು ಮಾರ್ಗಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಕನ್ನಡದ ಚಿತ್ರರಂಗದಲ್ಲಿ ರಾಜ್ ಕುಮಾರ್ ಸಾವಿನ ನಂತರ ನಾಯಕತ್ವದ ವಿಚಾರ ಬಂದರೆ ಅಂಬರೀಶ್ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಪ್ರಮುಖ ವಿಚಾರಗಳಲ್ಲಿ ಸರಕಾರದ ಜತೆ ಮಾತುಕತೆ ನಡೆಸುವುದಕ್ಕೂ ಅವರೇ ನಾಯಕತ್ವ ವಹಿಸುತ್ತಿದ್ದರು. ಇದೀಗ ಆ ಸ್ಥಾನವು ಖಾಲಿಯಾದಂತೆ ಕಾಣುತ್ತಿದೆ ಎಂದು ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಅಂಬರೀಶ್ ಅಂದರೆ ಎಲ್ಲರನ್ನೂ ಸಮಾನವಾದ ಸ್ನೇಹದಿಂದ ಕಾಣುತ್ತಿದ್ದರು. ಅಣ್ಣಾ ಬಯ್ದರು ಬಹಳ ಸಂತೋಷವಾಗುತ್ತೆ ಅನ್ನೋದು ಅವರದೇ ಅಭಿಮಾನಿಗಳ ಮಾತು. ಯಾವುದೇ ವಯಸ್ಸಿನವರ ಜತೆಗೂ ಸ್ನೇಹ-ಸಲುಗೆ ಇದ್ದಂಥ ವ್ಯಕ್ತಿ ಅಂಬರೀಶ್. ಅವರಿಗೆ ಜಗತ್ತಿನ ನಾನಾ ಭಾಗದಲ್ಲಿ ಸ್ನೇಹಿತರಿದ್ದರು. ಇದನ್ನು ಸ್ವತಃ ಅಂಬರೀಶ್ ಕೂಡ ಎಷ್ಟೋ ಸಂದರ್ಭದಲ್ಲಿ ಹೇಳಿದ್ದು ಉಂಟು.

ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಅಂಬರೀಶ್, ಕಾವೇರಿ ವಿವಾದದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದರು. ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅವರು, ಈ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿರಲಿಲ್ಲ. ತಮ್ಮ ಮಗ ಅಭಿಷೇಕ್ ಹೆಸರಿಗೆ ಆಸ್ತಿಯನ್ನು ಬರೆದಿದ್ದರು. ಇತ್ತೀಚೆಗೆ ಅವರ ಅನಾರೋಗ್ಯ ಕಾರಣಕ್ಕೆ ಆಗಾಗ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.

ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ತಂದೆ ಹುಚ್ಚೇಗೌಡ. ತಾಯಿ ಪದ್ಮಾವತಮ್ಮ. ಅವರು ಜನಿಸಿದ್ದು ಮೇ 29, 1952ರಲ್ಲಿ. ಅವರು ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಅವರ ಮೊದಲ ಚಿತ್ರ. ಈಚೆಗೆ ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತೋ ಅವರ ಕೊನೆಯ ಸಿನಿಮಾ.

ಅಂಬರೀಶ್ ಕೇಳಿದರೆ ಇಲ್ಲ ಅನ್ನೋ ಮಾತೇ ಇಲ್ಲ. ಅದೆಂಥ ಕೆಲಸವಾದರೂ ಮಾಡಿಕೊಡುವ ವ್ಯಕ್ತಿ ಎಂದು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ವೇದಿಕೆಯೊಂದರಲ್ಲಿ ಹೇಳಿದ್ದರು. ಅಂಬರೀಶ್ ಆರೋಗ್ಯದ ವಿಚಾರದ ಬಗ್ಗೆಯೇ ಅವರ ಎಲ್ಲ ಸ್ನೇಹಿತರು ಸಲಹೆ ನೀಡುತ್ತಿದ್ದರು. ಸಚಿವರಾಗಿದ್ದ ಅವಧಿಯಲ್ಲಿ ತೀವ್ರವಾದ ಅವರ ಅನಾರೋಗ್ಯವು ಐದು ವರ್ಷಗಳ ಅವಧಿಯೊಳಗೇ ಪ್ರಾಣ ಕಸಿದಿದೆ.

ಅಂಬರೀಶ್- ಸುಮಲತಾರ ಮಗ ಅಭಿಷೇಕ್ ಚಿತ್ರರಂಗದ ಅರಂಗೇಟ್ರಂಗೆ ಸಿದ್ಧತೆ ನಡೆಸಿದ್ದರು. ನಾಗಶೇಖರ್ ನಿರ್ದೇಶನದಲ್ಲಿ ‘ಅಮರ್ ನಾಥ್’ ಹೆಸರಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅದು ಬಿಡುಗಡೆ ಆಗುವ ಮುನ್ನವೇ ಅಂಬರೀಶ್ ನಿಧನರಾಗಿದ್ದಾರೆ. ತಮ್ಮ ಮಗನ ಸಿನಿಮಾ ಬಗ್ಗೆ ಅವರು ಕೂಡ ಹಲವು ಕಡೆ ಹೇಳಿಕೊಳ್ಳುತ್ತಿದ್ದುದು ಉಂಟು. (ಎನ್.ಬಿ)

Leave a Reply

comments

Related Articles

error: