
ದೇಶ
25 ಸಾವಿರ ಕೋಟಿ ರೂ ಹಗರಣ: ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯಕ್ಕೆ ಅಣ್ಣಾ ಹಜಾರೆ
ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು ನಡೆಸಿರುವ 25 ಸಾವಿರ ಕೋಟಿ ರೂಪಾಯಿ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಮುಂಬೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅನುಯಾಯಿ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆಯವರು ಎನ್ಸಿಪಿ ಅಧ್ಯಕ್ಷ, ಪ್ರಭಾವಿ ರಾಜಕೀಯ ಧುರೀಣ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಹಾಗೂ ಸಂಬಂಧಿಕ ಮಾಜಿ ನೀರಾವರಿ ಸಚಿವ ಅಜಿತ್ ಪವಾರ್ ಸೇರಿದಂತೆ ಹಗರಣದಲ್ಲಿ ಶಾಮೀಲಾಗಿರುವ ಪ್ರಮುಖ ರಾಜಕಾರಣಿಗಳ ಪಾತ್ರದ ಬಗ್ಗೆ ಕೂಲಂಕಷ ತನಿಖೆಯಾಗಬೇಕೆಂದು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಅಣ್ಣಾ ಹಜಾರೆಯವರು ಮುಂಬೈ ಹೈಕೋರ್ಟ್ನಲ್ಲಿ ಸಿಬಿಐ ತನಿಖೆಗಾಗಿ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಹೈಕೋರ್ಟ್ ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ಪೀಠವು ಜ.6 ರಂದು ವಿಚಾರಣೆ ನಡೆಸಲಿದೆ.
ಏನಿದು ಹರಗಣ?
ರೋಗಗ್ರಸ್ತ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಸರ್ಕಾರಕ್ಕೆ ಮತ್ತು ಸಹಕಾರಿ ವಲಯಕ್ಕೆ ಸುಮಾರು 25,000 ಕೋಟಿ ರೂಪಾಯಿಗಳಷ್ಟು ನಷ್ಟವುಂಟುಮಾಡಿರುವ ಪ್ರಭಾವಿಗಳು, ಸಹಕಾರಿ ವಲಯದ ಹಣವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.