ಮೈಸೂರು

ನ. 29 : ಮುಡಾ ಅದಾಲತ್

ಮೈಸೂರು. ನ.26:-  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳು ಹಾಗೂ ಕಾರಣಾಂತರಗಳಿಂದ ವಿಲೇವಾರಿ ಆಗದೇ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ದಿನಾಂಕ 15/10/2018 ರಿಂದ 31/10/2018 ರವರೆಗೆ ಸಾರ್ವಜನಿಕರಿಂದ ಹಕ್ಕು ಪತ್ರ, ಸ್ವಾಧೀನ ಪತ್ರ, ನಿವೇಶನ/ಮನೆ ಕಂದಾಯ ನಿಗದಿ, ಗುತ್ತಿಗೆ ನವೀಕರಣ, ಬದಲಿ ನಿವೇಶನ, ತುಂಡು ಜಾಗ ಮಂಜೂರಾತಿ ಹಾಗೂ ಪ್ರಾಧಿಕಾರದ ವ್ಯಪ್ತಿಯ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇತ್ಯಾದಿಯಾಗಿ ಒಟ್ಟು 200 ಅರ್ಜಿಗಳು ಸ್ವೀಕೃತವಾಗಿರುತ್ತವೆ.

ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನು ವಿಲೇವಾರಿಗೊಳಿಸುವ ಸಂಬಂಧ ಸೂಕ್ತವಾದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿರುತ್ತದೆ ಹಾಗೂ ಕ್ರಮ ಕೈಗೊಂಡ ಬಗ್ಗೆ ಪ್ರತಿಯೊಬ್ಬ ಅರ್ಜಿದಾರರಿಗೂ ಲಿಖಿತವಾಗಿ ಈಗಾಗಲೇ ತಿಳಿಸಲಾಗಿರುತ್ತದೆ.
ಅದಾಲತ್ ಅರ್ಜಿಗಳನ್ನು ಇತ್ಯರ್ಥಪಡಿಸಿಕೊಳ್ಳುವ ದಿಸೆಯಲ್ಲಿ ಅರ್ಜಿದಾರರಿಗೆ ಒಂದು ಸಾರ್ವಜನಿಕ ವೇದಿಕೆ ಕಲ್ಪಿಸುವ ದೃಷ್ಠಿಯಿಂದ ದಿನಾಂಕ 29/11/2018 ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ನಗರಾಭಿವೃದ್ಧಿ ಕಛೇರಿಯ ಆವರಣದಲ್ಲಿ “ಮುಡಾ ಅದಾಲತ್” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು ಭಾಗವಹಿಸಲಿದ್ದಾರೆ.  ಅಲ್ಲದೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಉನ್ನತ ಶಿಕ್ಷಣ ಸಚಿವರು, ಪ್ರಾಧಿಕಾರದ ಸದಸ್ಯರು ಹಾಗೂ ಜನ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ ತಮ್ಮ ಸಮಸ್ಯೆಗಳನ್ನು ಸೂಕ್ತವಾಗಿ ಇತ್ಯರ್ಥಪಡಿಸಿಕೊಳ್ಳಲು “ಮುಡಾ ಅದಾಲತ್” ಕಾರ್ಯಕ್ರಮವು ಒಂದು ಉತ್ತಮ ಅವಕಾಶವಾಗಿದ್ದು, ಅಹವಾಲುಗಳನ್ನು ಸಲ್ಲಿಸಿರುವ ಎಲ್ಲ ಅರ್ಜಿದಾರರು ಹಾಗೂ ಆಸಕ್ತರು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ ತನ್ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: