ಕ್ರೀಡೆಪ್ರಮುಖ ಸುದ್ದಿ

ನೆಹರು ಎಫ್‍ಸಿ ತಂಡಕ್ಕೆ ಹುತ್ತರಿ ಕಪ್ ಫುಟ್ಬಾಲ್ ಪ್ರಶಸ್ತಿ : ಮಿಲನ್ಸ್ ಅಮ್ಮತ್ತಿ ತಂಡ ರನ್ನರ್ಸ್ ಅಪ್ 

ರಾಜ್ಯ(ಮಡಿಕೇರಿ)ನ.26:- ಮರಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಹುತ್ತರಿ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲಿಬೆಟ್ಟದ ನೆಹರು ಎಫ್‍ಸಿ ತಂಡ ಛಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಅಮ್ಮತ್ತಿಯ ಮಿಲನ್ಸ್ ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅಂತಿಮ ಪಂದ್ಯದಲ್ಲಿ ನೆಹರು ಎಫ್‍ಸಿ ತಂಡವು 3-0 ಗೋಲುಗಳ ಅಂತರದಿಂದ ಅಮ್ಮತ್ತಿ ಮಿಲನ್ಸ್  ತಂಡವನ್ನು  ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ನೆಹರು ತಂಡದ ಪರವಾಗಿ ಗಣೇಶ್ ಮತ್ತು ಕಿರಣ್ ಗೋಲು ಗಳಿಸಿ ಜಯದ ರೂವಾರಿಗಳಾದರು.

ಪಂದ್ಯಾವಳಿ ವಿಜೇತ ನೆಹರೂ ಎಫ್‍ಸಿ ತಂಡ ಆಕರ್ಷಕ ಟ್ರೋಫಿಯೊಂದಿಗೆ 22,222 ರೂ.ನಗದು ಬಹುಮಾನವನ್ನು ಪಡೆದುಕೊಂಡಿತು.ರನ್ನರ್ಸ್ ಅಪ್ ಮಿಲನ್ಸ್ ಅಮ್ಮತ್ತಿ ತಂಡ ಆಕರ್ಷಕ ಟ್ರೋಫಿ ಮತ್ತು 11,111 ರೂ. ಪಡೆದುಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಮಿಲನ್ಸ್ ಅಮ್ಮತ್ತಿ ತಂಡ ಗುಡ್ಡೆಹೊಸೂರಿನ ಐಎನ್‍ಎಸ್ ತಂಡವನ್ನು ಪೆನಾಲ್ಟಿ ಶೂಟ್ ಔಟ್ ಮೂಲಕ 4-2 ಗೋಲುಗಳ ಅಂತರದಿಂದ ಸೋಲಿಸಿ,  ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿತು. ಮತ್ತೊಂದು ಪಂದ್ಯದಲ್ಲಿ  ನೆಹರು ಎಫ್‍ಸಿ ತಂಡವು 5-0 ಗೋಲುಗಳ ಅಂತರದಿಂದ ಹಾಲುಗುಂದ ತಂಡವನ್ನು ಮಣಿಸಿ  ಫೈನಲ್ ಪ್ರವೇಶಿಸಿತು.

ವಿಶೇಷ ಬಹುಮಾನ-ಸರಣಿಯ ಅತ್ಯುತ್ತಮ ತಂಡವಾಗಿ ಭಗವತಿ ಎಫ್‍ಸಿ ಹಾಲುಗುಂದ ಪ್ರಶಸ್ತಿ ಪಡೆದರೆ, ಐಎನ್‍ಎಸ್ ತಂಡದ ದಿವಾಕರ್ 6 ಗೋಲು ಬಾರಿಸಿ ಅತ್ಯಧಿಕ ಸ್ಕೋರರ್ ಪ್ರಶಸ್ತಿ ಪಡೆದರು. ನೆಹರು ಎಫ್‍ಸಿ ತಂಡದ ಮಣಿ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ನೆಹರು ಎಫ್‍ಸಿ ತಂಡದ ನೌಸಿಫ್ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದುಕೊಂಡರು.

ಮಹಿಳಾ ಪಂದ್ಯಾವಳಿ- ಅಂತಿಮ ಪಂದ್ಯಕ್ಕೂ ಮುನ್ನ ಲಯನ್ಸ್ ವುಮೆನ್ಸ್ ಫುಟ್ಬಾಲ್ ಕ್ಲಬ್ ಗೋಣಿಕೊಪ್ಪ ಮತ್ತು ಕೂರ್ಗ್ ವುಮೆನ್ಸ್ ಫುಟ್ಬಾಲ್ ಕ್ಲಬ್ ತಂಡಗಳ ಮಧ್ಯೆ ಪ್ರದರ್ಶನ ಪಂದ್ಯ ನಡೆಯಿತು. ಇದರಲ್ಲಿ ಗೋಣಿಕೊಪ್ಪ ತಂಡ 3-1 ಗೋಲುಗಳಿಂದ ಜಯಗಳಿಸಿತು.

ಸಮಾರೋಪದಲ್ಲಿ ನಿವೃತ್ತ ಯೋಧ ಐಮಂಡ ನಾಣಯ್ಯ,  ವೈಷ್ಣವಿ ಎಫ್‍ಸಿ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆದಂಬಾಡಿ ಚಂದ್ರಕಲಾ, ನಿವೃತ್ತ ಯೋಧ ಐಮಂಡ ನಾಣಯ್ಯ, ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್, ಅಫರ್ಡೇಬಲ್ ಕಾರ್ ಆಕ್ಸಸರೀಸ್ ಮಾಲೀಕ ಅಬ್ದುಲ್ ಹಕೀಂ, ಮರಗೋಡು ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶಿವು ಮೊದಲಾದವರು ಭಾಗವಹಿಸಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: