ಪ್ರಮುಖ ಸುದ್ದಿಮೈಸೂರು

ಆರ್.ಟಿ.ಐ ಕಾರ್ಯಕರ್ತನ ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಡಿ.30ರಂದು ಸಾಯಂಕಾಲ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನದ ಸಮೀಪ ಕಾವೇರಿ ನದಿಯ ತೀರದಲ್ಲಿ ಆರ್.ಟಿ.ಐ ಕಾರ್ಯಕರ್ತ ಶ್ರೀಕಾಂತ ಶವ ಪತ್ತೆಯಾಗಿತ್ತು. ಅದು ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಜರಾಜೇಶ್ವರಿ ನಗರ ನಿವಾಸಿಗಳಾದ ಪುಟ್ಟಸ್ವಾಮಿ ಮತ್ತು ಲಕ್ಷ್ಮೇಗೌಡ ಎಂದು ಗುರುತಿಸಲಾಗಿದೆ. ಕೊಲೆಯಾದ ಆರ್.ಟಿ.ಐ ಕಾರ್ಯಕರ್ತ ಶ್ರೀನಾಥ್ ಬೆಮೆಲ್  ಹೌಸಿಂಗ್ ಬೋರ್ಡ್ ಸೊಸೈಟಿಯ ಅಧ್ಯಕ್ಷ  ಲೋಕೇಶ್ ಎಂಬವರಿಂದ 25-30 ಲಕ್ಷ ರೂಗಳನ್ನು ಸಾಲವಾಗಿ ಪಡೆದಿದ್ದರು ಎನ್ನಲಾಗಿದೆ. ಅವರು ವಾಪಸ್ ಕೇಳಿದಾಗ ಶ್ರೀನಾಥ್ ಲೋಕೇಶ್ ಅವರಿಗೆ ಬೆದರಿಕೆ ಹಾಕುತ್ತಿದ್ದರು. ಇದರಿಂದ ಲೋಕೇಶ್ ಮಾನಸಿಕವಾಗಿ ನೊಂದಿದ್ದರು. ಇದನ್ನು ಗಮನಿಸಿದ ಲೋಕೇಶ್ ಸ್ನೇಹಿತರಾದ ಪುಟ್ಟಸ್ವಾಮಿ, ಮತ್ತು ಲಕ್ಷ್ಮೇಗೌಡ ಇವರ ಹತ್ಯೆಗೆ ಸಂಚು ರೂಪಿಸಿದ್ದರು. ಅದರಂತೆ ರಾಜರಾಜೇಶ್ವರಿ ನಗರದಲ್ಲಿ ಕನ್ಸಸ್ಟ್ರಕ್ಷನ್ ನಡೆಯುತ್ತಿದ್ದ ಮನೆಯೊಂದಕ್ಕೆ ಶ್ರೀನಾಥ್ ಅವರನ್ನು ಕರೆದೊಯ್ದು ಅಲ್ಲಿ ಕಟ್ಟಿಗೆಯ ತುಂಡುಗಳಿಂದ ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ. ಬಳಿಕ ಓಮಿನಿ ಕಾರಿನಲ್ಲಿ ಕೊಂಡೊಯ್ದು ನಿಮಿಷಾಂಬಾ ದೇವಳದ ಬಳಿ  ಬಿಸಾಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಕೊಲೆ ಆರೋಪಿಗಳನ್ನು ಮೈಸೂರಿನ ರಿಂಗ್ ರಸ್ತೆಯ ಬಳಿ ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮುಡಾ ಸಹಾಯಕ ಇಂಜಿನಿಯರ್ ಮಹೇಶ್ ಎಂಬವರ ಮನೆ ಮೇಲಿನ ಐಟಿ ಅಧಿಕಾರಿಗಳ ದಾಳಿಗೂ ಇವರೇ ಮಾಹಿತಿ ನೀಡಿದ್ದರು ಎನ್ನುವುದನ್ನು ತಿಳಿದಿದ್ದ ಆರೋಪಿಗಳು ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಿದ್ದರು ಎನ್ನಲಾಗಿದೆ.

ಆರೋಪಿಗಳ ಬಂಧನಕ್ಕೆ ಸರಸ್ವತಿಪುರಂ ಠಾಣೆಯ ಇನ್ಸಪೆಕ್ಟರ್ ಪೂವಯ್ಯ, ಸಿಬ್ಬಂದಿ ಮಂಜು, ಪ್ರಕಾಶ್, ದಿಲೀಪ್ ಮತ್ತಿತರರು ಪಾಲ್ಗೊಂಡಿದ್ದರು. ಇದೀಗ ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸ್ ಇನ್ಸಪೆಕ್ಟರ್ ದೀಪಕ್ ಅವರಿಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಓಮಿನಿ ಕಾರು, ಎರಡು ಬೈಕ್ ಮತ್ತು ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ರೆಡ್ಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ  ಪೊಲೀಸ್ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.

Leave a Reply

comments

Related Articles

error: