ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಡಿಸೆಂಬರ್ 10 ರಿಂದ ಆರಂಭವಾಗುವ ಅಧಿವೇಶನ ಸಂದರ್ಭ ಯಾವುದೇ ಪ್ರತಿಭಟನೆ ಆಗದಂತೆ ಎಚ್ಚರವಹಿಸಿ : ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ

ರಾಜ್ಯ(ಬೆಂಗಳೂರು)ನ.28:- ಬೆಳಗಾವಿಯಲ್ಲಿ ಡಿಸೆಂಬರ್ 10 ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆಗಳು ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಳಗಾವಿಯ ಸುವರ್ಣಸೌಧ ಇರುವುದೇ ಪ್ರತಿಭಟನೆಗೆ ಎಂಬಂತಾಗಿದೆ. ಅಧಿವೇಶನದ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆಗಳು ಆಗದಂತೆ ಜಿಲ್ಲಾಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರು ವಿಧಾನಸೌಧದ ಮೆಟ್ಟಿಲು ಹತ್ತಬಾರದು. ಆ ರೀತಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲಾ ಮಟ್ಟದಲ್ಲೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದರು.

ಜನರ ಸಮಸ್ಯೆಯಾಗಲೀ, ರೈತರ ಸಮಸ್ಯೆಯಾಗಲೀ ಎಲ್ಲವನ್ನೂ ಜಿಲ್ಲಾ ಮಟ್ಟದಲ್ಲೇ ಬಗೆಹರಿಸಿದರೆ ರೈತರಾಗಲಿ, ಜನರಾಗಲೀ ವಿಧಾನಸೌಧದ ಮೆಟ್ಟಿಲು ಹತ್ತುವುದಿಲ್ಲ. ಇದನ್ನು ಜಿಲ್ಲಾಧಿಕಾರಿಗಳು ಅರ್ಥ ಮಾಡಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು. ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆಯಾಗದಂತೆ ಜನರ ಸಮಸ್ಯೆಗಳನ್ನು ಪರಿಹರಿಸಿ ಎಂದು ತಾಕೀತು ಮಾಡಿದ ಅವರು, ಜನ ಸಮ್ಮಿಶ್ರ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಆ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿದೆ ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರದ ಗೊತ್ತು, ಗುರಿ ಬಗ್ಗೆ ಜನರಷ್ಟೇ ಅಲ್ಲ, ಕೇಂದ್ರ ಸರ್ಕಾರ, ಬೇರೆ ಬೇರೆ ರಾಜ್ಯದ ರಾಜಕೀಯ ಪಕ್ಷಗಳು ಗಮನ ಕೇಂದ್ರೀಕರಿಸಿವೆ. ಮುಂದಿನ ದಿನಗಳಲ್ಲಿ ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಗಮಿಸುತ್ತಿದೆ. ಹಾಗಾಗಿ ಒಳ್ಳೆಯ ಆಡಳಿತ ನೀಡುವತ್ತ ಎಲ್ಲ ಅಧಿಕಾರಿಗಳು ಚಿತ್ತಹರಿಸಬೇಕು ಎಂದು ಹೇಳಿದರು.

ಜನಸಾಮಾನ್ಯರು ವಿಧಾನಸೌಧಕ್ಕೆ ಬರುವುದನ್ನು ತಪ್ಪಿಸಿ, ಗ್ರಾಮ ವಾಸ್ತವ್ಯ ಹೂಡಿ ಎಂದು ಈ ಹಿಂದೆ ಅಧಿಕಾರಿಗಳಿಗೆ ಸೂಚಿಸಿದ್ದೇವು. ಈ ಬಗ್ಗೆಯೂ ಮಾಹಿತಿ ನೀಡಬೇಕು ಎಂದರು.

ರಾಜ್ಯದಲ್ಲಿ ಬರ ಛಾಯೆ ಇದೆ. ಮುಂದಿನ ದಿನಗಳು ಸವಾಲಿನ ದಿನಗಳು. ಈಗಾಗಲೇ ನೂರು ತಾಲ್ಲೂಕುಗಳಲ್ಲಿ ಬರಗಾಲವೆಂದು ಘೋಷಿಸಲಾಗಿದೆ. ಇನ್ನು ಕೆಲ ತಾಲ್ಲೂಕುಗಳು ಇದಕ್ಕೆ ಸೇರ್ಪಡೆಯಾಗಬಹುದು. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಸಮರ್ಪಕವಾಗಿ ಪರಿಸ್ಥಿತಿ ನಿಭಾಯಿಸುವಂತೆ ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಹಲವು ಕಡೆ ಕಾಣಿಸಿಕೊಂಡಿದೆ. ಟ್ಯಾಂಕರ್‌ಗಳಲ್ಲಿ ನೀರು ಒದಗಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದರು. ಹಾಗಾಗಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಿ. ಸರ್ಕಾರ ಈಗಾಗಲೇ ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಿದೆ. ಜತೆಗೆ ಜಿಲ್ಲಾಧಿಕಾರಿಗಳ ಸಿಡಿ ಅಕೌಂಟ್‌ನಲ್ಲೂ ಐದು ಕೋಟಿ ರೂ. ಹಣವಿದೆ. ಹಣದ ಕೊರತೆ ಇಲ್ಲ ಎಂದು ಹೇಳಿದರು.

ಅಭಿವೃದ್ಧಿ ಸಂದರ್ಭದಲ್ಲಿ 4500 ಕೋಟಿ ರೂ. ಕೇಂದ್ರ ಸರ್ಕಾರವನ್ನು ಕೋರಿದ್ದೇವು. 546 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಜಿಲ್ಲಾಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆಯೂ ಕಿವಿ ಮಾತು ಹೇಳಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ನರೇಗಾದ ಪ್ರಗತಿ ಶೇ. 2 ರಷ್ಟಿದ್ದರೆ ಬಳ್ಳಾರಿಯಲ್ಲಿ ಶೇ. 33 ರಷ್ಟಿದೆ ಎಂದು ನವಿರಾಗಿಯೇ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: