
ಚಿಕ್ಕಮಗಳೂರಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸಹಕಾರ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಹಾಲಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಸಂಪ್ರದಾಯದಂತೆ ನೆರವೇರಿತು. ಅವರ ಪುತ್ರ ಗಣೇಶ್ ಪ್ರಸಾದ್ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾದಾಪಟ್ಟಣದ ಸದಾಶಿವ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರುಗಳಾದ ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್, ಶರಣ ಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ತನ್ವೀರ್ ಸೇಠ್, ಡಿ.ಕೆ. ಶಿವಕುಮಾರ್ ಸೇರಿದಂತೆ, ಹಲವು ರಾಜಕೀಯ ನಾಯಕರು ಪಕ್ಷಭೇದ ಮರೆತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಜಾತಶತ್ರುವಿಗೆ ಅಂತಿಮ ವಿದಾಯ ಹೇಳಿದರು.
ಮಹದೇವಪ್ರಸಾದ್ ಅವರ ತಂದೆ ತಾಯಿಯ ಸಮಾಧಿಯ ಬಳಿಯೇ ಇವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಮಂಡ್ಯ, ಮೈಸೂರು, ಚಾಮರಾಜನಗರಗಳಿಂದ ಬಂದ ಅವರ ಅಭಿಮಾನಿಗಳು ಕಂಬನಿದುಂಬಿ ತಮ್ಮ ದೊರೆಗೆ ಅಂತಿಮ ವಿದಾಯ ಹೇಳಿದರು.
ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರು ಅಪಾರ ಜನಸ್ತೋಮದ ಸಮ್ಮುಖ ಪಂಚಭೂತಗಳಲ್ಲಿ ಲೀನವಾದರು.