ಪ್ರಮುಖ ಸುದ್ದಿಮೈಸೂರು

ನವೀಕರಿಸಲ್ಪಟ್ಟ ಇಎಸ್ಐ ಆಸ್ಪತ್ರೆ ಉದ್ಘಾಟನೆ : ಕೇಂದ್ರ ಸಹಕಾರ ನೀಡಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ;ಸಚಿವ ವೆಂಕಟರಮಣಪ್ಪ

ಮೈಸೂರು,ನ.28:-  ಸುಮಾರು 33. 10 ಕೋಟಿ ವೆಚ್ಚದ ನೂರು ಹಾಸಿಗೆಯುಳ್ಳ ಸುಸಜ್ಜಿತ, ನವೀಕರಿಸಲ್ಪಟ್ಟ ಮೈಸೂರಿನ ಕೆ.ಆರ್.ಎಸ್ ಮುಖ್ಯರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯನ್ನು  ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ ಉದ್ಘಾಟಿಸಿದರು.

ಟೇಪ್ ಕತ್ತರಿಸುವ ಮೂಲಕ ನವೀಕೃತ ಆಸ್ಪತ್ರೆಗಿಂದು ಚಾಲನೆ ನೀಡಿದರು. ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿದ ಸಚಿವ ವೆಂಕಟರಮಣಪ್ಪ ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಾರ್ಮಿಕ ಇಲಾಖೆಯ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿದೆ. ಆದರೆ ಇಎಸ್ಐ ಆಸ್ಪತ್ರೆಗಳಲ್ಲಿ ಕೆಲ ಸಿಬ್ಬಂದಿಗಳ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ‌ಕ್ರಮಗಳನ್ನು  ಕೈಗೊಳ್ಳಲು ಮುಂದಾಗಿದ್ದೇವೆ. ಇದಕ್ಕೆ ಕೇಂದ್ರ ಸಹಕಾರ ನೀಡಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಪ್ರತಾಪ್ ಸಿಂಹ ಅವರು ಬರೀ ಭಾಷಣಕ್ಕೆ ಸೀಮಿತವಾಗಬಾರದು. ಬರೀ ಮಾತನಾಡೊದಲ್ಲ, ನುಡಿದಂತೆ ನಡೆಯಬೇಕು. ನೀವೆಲ್ಲಾ ಬರೀ ಮಾತನಾಡ್ತೀರಿ, ಹೇಳಿದ ಕೆಲಸ ಮಾಡಲ್ಲ. ಮೊದಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿ ಕೆಲಸಗಳನ್ನು ಮಾಡಿಸಿ ಎಂದು ಸಂಸದ ಪ್ರತಾಪ್ ಸಿಂಹರಿಗೆ ಟಾಂಗ್ ನೀಡಿದರು. ತನ್ವೀರ್ ಸೇಠ್ ಅವರು ಕೂಡಾ ಕಾರ್ಮಿಕ ಸಚಿವರಾಗಿದ್ದರು. ಅವರು ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅವರ ತಂದೆ ನನಗೆ ಬಹಳ ಅತ್ಮೀಯರು. ತನ್ವೀರ್ ಸೇಠ್ ಬರಿ ಮಾತುಗಾರ, ಅಪ್ಪನಂತೆ ಗಟ್ಟಿತನವಿಲ್ಲ. ಆದರೆ ತನ್ವೀರ್ ಸೇಠ್ ನನಗೆ ಮಗನಿದ್ದಂತೆ, ಒಳ್ಳೆಯವ ಎಂದರು.

ಸಂಸದ ಧೃವನಾರಾಯಣ್ ಮಾತನಾಡಿ  ಕಾರ್ಮಿಕರಿಗೆ ಅನುಕೂಲವಾಗುವಂತೆ ನವೀಕೃತ ಆಸ್ಪತ್ರೆಗೆ ಇಂದಿನಿಂದ ಚಾಲನೆ ದೊರೆತಿದೆ. ಅತ್ಯಾಧುನಿಕ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆ ಇದಾಗಿದೆ. ಸುಮಾರು 1.27ಸಾವಿರ ಕಾರ್ಮಿಕರಿಗೆ ಉಪಯುಕ್ತವಾಗಲಿದೆ. ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರದ ಅನುದಾನದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಶ್ರಮವಹಿಸಿದ ಪ್ರತಾಪ್ ಸಿಂಹ ಅವರನ್ನು ಅಭಿನಂದಿಸುತ್ತೇನೆ ಎಂದರು. ನಮ್ಮ ದೇಶದ ಅಭಿವೃದ್ಧಿಗೆ ಕಾರ್ಮಿಕರು ಬಹಳ ಮುಖ್ಯ. ಕಾರ್ಮಿಕರ ಹಿತದೃಷ್ಟಿ  ಕಾಯುವುದು ಸರ್ಕಾರಗಳ ಕರ್ತವ್ಯವಾಗಿದೆ ಎಂದರು.

ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ ಮೈಸೂರಿನಲ್ಲಿ ನವೀಕೃತ ಇಎಸ್ಐ ಆಸ್ಪತ್ರೆಗೆ ಇಂದು ಚಾಲನೆ ದೊರೆತಿದೆ. ಸುಮಾರು 33. 10 ಕೋಟಿ ವೆಚ್ಚದ ನೂರು ಹಾಸಿಗೆಯುಳ್ಳ ಆಸ್ಪತ್ರೆ ಇದಾಗಿದೆ. ಆದರೆ 13 ಕೋಟಿ ಅತ್ಯಾಧುನಿಕ ಉಪಕರಣಗಳು, ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಇಲ್ಲಿ ಕೆಲ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಈ ಕೆಲ ಸಮಸ್ಯೆಗಳಿಗೆ ರಾಜ್ಯ ಕಾರ್ಮಿಕ ಸಚಿವರ ಸಹಕಾರ ಬೇಕು ಎಂದು ಮನವಿ ಮಾಡಿದರು.ಕಾರ್ಮಿಕರ ಆರೊಗ್ಯ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದೆ. ಹಾಗಾಗಿ ಕಾರ್ಮಿಕರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ರೂಪಿಸಿದೆ. ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: