ಮೈಸೂರು

ಕೇವಲ ಭಾಷಣಕಾರರಾದರೇ ಸಾಲದೆಂದು ಸಂಸದ ಪ್ರತಾಪ್ ಸಿಂಹರಿಗೆ ಟಾಂಗ್ ನೀಡಿದ ಸಚಿವರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಸಿಂಹ

ಮೈಸೂರು,ನ.28:- ಕೇವಲ ಭಾಷಣಕಾರರಾದರೇ ಸಾಲದು. ಮಾತನಾಡದೆ ಕೆಲಸ ಮಾಡಬೇಕು ಎಂದು ತಮಗೆ ನೇರವಾಗಿ  ಟಾಂಗ್ ಕೊಟ್ಟ ಸಮ್ಮಿಶ್ರ ಸರ್ಕಾರದ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರನ್ನು  ಮೈಸೂರು –ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ವೇದಿಕೆಯಲ್ಲೇ ಬಹಿರಂಗವಾಗಿ ತರಾಟೆ ತೆಗೆದುಕೊಂಡ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.

ಇಂದು ಮೈಸೂರಿನ ನವೀಕರಿಸಲ್ಪಟ್ಟ 100 ಹಾಸಿಗೆಗಳ ಇಎಸ್ ಐ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ವೆಂಕಟರಮಣಪ್ಪ  ಉದ್ಘಾಟಿಸಿದ್ದರು.

ಕಾರ್ಯಕ್ರಮ ಉದ್ಘಾಟನೆಯಾದ ಬಳಿಕ ಮೊದಲು ಮಾತನಾಡಿದ ಸಂಸದ ಪ್ರತಾಪ್ ಸಿಂಹ , 2012 ರಲ್ಲಿ ಸಂಸದನಾದಾಗ ಈ ಆಸ್ಪತ್ರೆಗೆ ಹಣ ಬಿಡುಗಡೆಗೊಂಡಿದ್ದರೂ ಸರಿಯಾಗಿ ಕೆಲಸ ಮಾಡದೆ ನಿಂತಿತ್ತು. ಹೀಗಾಗಿ ಮತ್ತೆ 9 ಕೋಟಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿದೆ. ನೂತನ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ರಾಜ್ಯ ಸಚಿವರು ಗಮನಹರಿಸಿಬೇಕು.  ಜತೆಗೆ ಮೈಸೂರಿನ ಇಎಸ್ ಐ ಆಸ್ಪತ್ರೆ ಕೇಂದ್ರ ಸರ್ಕಾರದ ಸುಪರ್ದಿಗೆ ವಹಿಸಿಕೊಟ್ಟರೆ  ಉತ್ತಮ ರೀತಿಯಲ್ಲಿ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಶಾಸಕ ತನ್ವೀರ್ ಸೇಠ್ , 21 ಸಾವಿರ ಒಳಗಿನ ವೇತನದಾರರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ. ಇಎಸ್ ಐ. ಆಸ್ಪತ್ರೆಗಳು ರೆಫರಲ್ ಆಸ್ಪತ್ರೆಗಳಾಗಿವೆ. ಸಾಮಾನ್ಯ ಮೆಕಾನಿಕ್ ಗಳು ಕೂಡ ಇಎಸ್ ಐ ಸೌಲಭ್ಯ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಚಿಂತಿಸಬೇಕಿದೆ ಎಂದು ಸಲಹೆ ನೀಡಿದರು.

ಇದಾದ ನಂತರ ಕಾರ್ಮಿಕ ಸಚಿವ ವೆಂಕಟರಮಣಪ್ಪ ಭಾಷಣ ಆರಂಭಿಸಿ,  ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ನಾವು ಬದಲಾವಣೆ ತಂದಿದ್ದೇವೆ. ಈ ನಡುವೆ ಬಹಳಷ್ಟು ವೈದ್ಯರ ಕೊರತೆ ಇದ್ದು, ನರ್ಸ್ ಗಳು ಫಾರ್ಮಾಸಿಸ್ಟ್ ಗಳ ಕೊರತೆಯನ್ನು ನೀಗಿಸುವಂತೆ ಕೆಪಿಎಸ್ ಸಿಗೆ ತಿಳಿಸಿದ್ದೇವೆ ಎಂದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹಗೆ ನೇರವಾಗಿ ಟಾಂಗ್ ಕೊಟ್ಟ ಸಚಿವ ವೆಂಕಟರಮಣಪ್ಪ, ಸಂಸದರಾದ ಪ್ರತಾಪ್ ಸಿಂಹ ಬರಿ ಮಾತನಾಡಬಾರದು. ಹೇಳಿದ ಮಾತು ಕಾರ್ಯಗತವಾಗಬೇಕು. ಕೇವಲ ಭಾಷಣಕಾರರಾಗಬಾರದು ಎಂದು ವೇದಿಕೆಯಲ್ಲೇ ಚಾಟಿ ಬೀಸಿದ್ದರು. ಕಾರ್ಮಿಕ ಮಕ್ಕಳಿಗೆ ಒಂದನೇ ತರಗತಿಯಿಂದಲೆ ಹಣ ನೀಡುತ್ತಿದ್ದೇವೆ. ಕಾರ್ಮಿಕ ಮಕ್ಕಳ ಮದುವೆಗೆ 50 ಸಾವಿರ ನೀಡುತ್ತಿದ್ದು ಈ ಮೂಲಕ ಸರ್ಕಾರದಿಂದ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಜತೆಗೆ ಕಾರ್ಮಿಕರಿಗೆ ಮನೆ ನೀಡುತ್ತಿದ್ದೇವೆ. ಇನ್ನು ಸಭೆಯಲ್ಲಿ ಸಿಬ್ಬಂದಿಯ ನೇರ ನೇಮಕಾತಿ ಮಾಡಿಕೊಳ್ಳುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಕೆಪಿಎಸ್ ಸಿಗೆ ಈಗಾಗಲೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಇದೇ ವೇಳೆ ಸಚಿವರನ್ನು ಸಂಸದ ಪ್ರತಾಪ್ ಸಿಂಹ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಸಚಿವ ವೆಂಕಟರಮಣಪ್ಪ ಹೇಳಿಕೆಗೆ ಗರಂ ಆದ ಸಂಸದ ಪ್ರತಾಪ್ ಸಿಂಹ, ಕಾರ್ಮಿಕ ಸಚಿವರ ಮಾತು ಮುಗಿಯುತ್ತಿದ್ದಂತೆ ಮತ್ತೆ ಮೈಕ್ ಮುಂದೆ ನಿಂತು ವೇದಿಕೆಯಲ್ಲೇ ಸಚಿವರನ್ನು ತರಾಟೆಗೆ ತೆಗೆದುಕೊಂಡರು.  ನಾನು ಹೇಳಿದಂತೆ ಮಾಡಿದ್ದೇನೆ. ಮೈಸೂರಲ್ಲಿ ಬಂಗಲೆ ಕಟ್ಟಲು ಅಥವಾ ಕೊಡಗಿನಲ್ಲಿ ಎಸ್ಟೇಟ್ ಖರೀದಿಸಲು ಬಂದಿಲ್ಲ ಎಂದ ಖಾರವಾಗಿ ನುಡಿದರು.

ಮೈಸೂರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯುವುದಾಗಿ ಹೇಳಿದ್ದೆ. ಬ್ರಾಂಡ್ ನ್ಯೂ ಎರ್ ಪೋರ್ಟ್ ನಿರ್ಮಾಣಕ್ಕೆ 700 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಮೈಸೂರು ಮಡಿಕೇರಿ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಮೊದಲು ರಾಜ್ಯ ಸರ್ಕಾರ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಲಿ ಎಂದು ಸಚಿವ ವೆಂಕಟರಮಣಪ್ಪ ಅವರಿಗೆ ತಿರುಗೇಟು ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: