ಪ್ರಮುಖ ಸುದ್ದಿ

ಶಬರಿಮಲೆ ಪ್ರವೇಶಿಸಲು ಯತ್ನಿಸಿ ಸುದ್ದಿಯಾಗಿದ್ದ ಹೋರಾಟಗಾರ್ತಿ ರೆಹಾನಾ ಫಾತಿಮಾ ಕೆಲಸದಿಂದ ಅಮಾನತು

ದೇಶ(ಕೇರಳ)ನ.28:-  ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇರೆಗೆ ಶಬರಿಮಲೆ ಪ್ರವೇಶಿಸಲು ಯತ್ನಿಸಿ ಸುದ್ದಿಯಾಗಿದ್ದ ಹೋರಾಟಗಾರ್ತಿ ರೆಹಾನಾ ಫಾತಿಮಾ ಅವರನ್ನು  ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಭಾರತ್​ ಸಂಚಾರ್ ನಿಗಮ ಲಿಮಿಟೆಡ್​ (ಬಿಎಸ್ಸೆನ್ನೆಲ್) ತಿಳಿಸಿದೆ.

ಶಬರಿಮಲೆ ಪ್ರವೇಶಕ್ಕೆ ಕುರಿತಂತೆ ಫೇಸ್ ಬುಕ್ ಪೋಸ್ಟ್ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ರೆಹಾನಾ ಫಾತಿಮಾ ಬಂಧನಕ್ಕೀಡಾಗಿದ್ದು, ಇದರ ಬೆನ್ನಲ್ಲೇ ಬಿಎಸ್ಸೆನ್ನೆಲ್ ಸಂಸ್ಥೆ ಕೂಡ ಅವರನ್ನು ಕೆಲಸದಿಂದ ಅಮಾನತು ಮಾಡಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಬಿಎಸ್ಸೆನ್ನೆಲ್ ವಕ್ತಾರರು, ರೆಹನಾ ಫಾತಿಮಾ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದರಿಂದ ಅವರನ್ನು ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರೆಹನಾ ಫಾತಿಮಾ ಬಿಎಸ್ಸೆನ್ನೆಲ್​ನ ಪಳರಿವತ್ತಮ್ ಟೆಲಿಫೋನ್​ ಎಕ್ಸ್​ಚೇಂಜ್​ನಲ್ಲಿ ಟೆಲಿಕಾಂ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಕೊಚ್ಚಿ ಶಾಖೆಯಲ್ಲಿ ಇದ್ದ ಅವರನ್ನು ಶಬರಿಮಲೆ ವಿಚಾರದಲ್ಲಿ ಗಲಾಟೆಯಾದ ಬಳಿಕ ಪಳರಿವತ್ತಮ್ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು.

ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಉದ್ದೇಶದಿಂದ ರೆಹನಾ ಅವರು ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದಾರೆ ಎಂದು ರಾಧಾಕೃಷ್ಣ ಮೆನನ್‌ ದೂರು ನೀಡಿದ್ದರು. ಕೊಚ್ಚಿಯ ಪಾಲಾರಿವಟ್ಟಂನಲ್ಲಿರುವ ಕಚೇರಿಯಲ್ಲಿ ರೆಹನಾ ಅವರನ್ನು ಇತ್ತೀಚಿಗೆ ಪಟ್ಟನಂತಿಟ್ಟ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ರೆಹನಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: