ಕ್ರೀಡೆಮೈಸೂರು

ಸೋಮಾನಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ಎಂ.ಆರ್‌.ಧನುಷಾಗೆ ರಾಷ್ಟ್ರೀಯ ಜೂನಿಯರ್‌ ಹೆಪ್ಟಾಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ

ಮೈಸೂರು,ನ.28:- ಮೈಸೂರು ಮೂಲದ ಸೋಮಾನಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ  ಎಂ.ಆರ್‌.ಧನುಷಾ, ರಾಷ್ಟ್ರೀಯ ಜೂನಿಯರ್‌ ಹೆಪ್ಟಾಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ.

ಎಂ ಆರ್ ಧನುಷಾ ಕೆ ಆರ್ ನಗರದ ರಿಕ್ಷಾಚಾಲಕ ಮಂಜು ಮತ್ತು ರುಕ್ಮಿಣಿಯವರ ಮಗಳು. ರಾಷ್ಟ್ರಮಟ್ಟದ ಅತಿ ಹೆಚ್ಚು ಕ್ರೀಡಾ ಸಾಮರ್ಥ್ಯ‌ ಅಂದರೆ ಒಟ್ಟು ಏಳು ರೀತಿಯ ಕ್ರೀಡಾ ಸಾಮರ್ಥ್ಯವುಳ್ಳ ಅಥ್ಲೆಟಿಕ್‌ನ ಹೆಪ್ಟಾಥ್ಲಾನ್‌ ನಲ್ಲಿ ಗೆಲುವು ಸಾಧಿಸಿರುವುದು ನಿಜಕ್ಕೂ ಶ್ಲಾಘನೀಯ. 2016-17ರಲ್ಲಿ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಫೆಡರೇಷನ್‌ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಧನುಷಾ, ಇಂಡಿಯನ್‌ ಕ್ಯಾಂಪ್‌ಗೆ ಆಯ್ಕೆಗೊಂಡಿದ್ದರು. ಜಪಾನ್‌ನಲ್ಲಿ ಜೂನ್‌ ಮೊದಲ ವಾರದಲ್ಲಿ ನಡೆದ ಏಷಿಯನ್‌ ಗೇಮ್ಸ್‌ನಲ್ಲಿ ಜೂನಿಯರ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ 8ನೇ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಗಳಿಸಿದ್ದಾರೆ. ಇದಲ್ಲದೆ ಕೆಲ ದಿನಗಳ ಹಿಂದೆ ನಡೆದ ಮೈಸೂರು ದಸರಾ ಹೆಪ್ಟಾಥ್ಲಾನ್‌ನಲ್ಲಿ ಪ್ರಥಮ, ಲಾಂಗ್‌ಜಂಪ್‌ ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದರು.

100 ಮೀ.ಹರ್ಡಲ್ಸ್‌, 200,800 ಮೀ. ಓಟ, ಗುಂಡು ಎಸೆತ, ಜಾವೆಲಿನ್‌ ಥ್ರೋ, ಎತ್ತರ, ಉದ್ದ ಜಿಗಿತದಲ್ಲಿ 7 ಕ್ರೀಡೆಗಳನ್ನು ಒಳಗೊಂಡಿರುವ ಹೆಪ್ಟಾಥ್ಲಾನ್‌ನಲ್ಲಿ 18 ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. 1980ರಲ್ಲಿ ಪರಿಚಯವಾದ ಈ ಕ್ರೀಡೆಯೂ 1984ರಿಂದ ಒಲಂಪಿಕ್ಸ್‌ನಲ್ಲಿ ಸೇರಿದೆ. ಮೈಸೂರು ಪ್ರತಿಭೆ ಎಂ.ಆರ್‌.ಧನುಷಾ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ. ಅಲ್ಲದೆ ಅದಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಧನುಷಾ ಅವರ ಈ ಸಾಧನೆಗಳಿಗೆ ಅಥ್ಲೆಟಿಕ್‌ ಕ್ರೀಡಾಪಟು, ಅಕ್ಕ ಅನುಷಾ ಸ್ಫೂರ್ತಿಯಂತೆ. ಪೋಷಕರು ಮತ್ತು ಮೈಸೂರಿನಲ್ಲಿರುವ ಮಾವ ಕುಮಾರ್‌ ಅವರ ಆಸೆಯಿಂದ ಕ್ರೀಡಾಪಟುವಾಗಿ ಬೆಳೆದಿದ್ದು, ಬೆಂಗಳೂರಿನಲ್ಲಿ ಅಶೋಕ್‌ ಪಿ.ಮಂಥೂರ್‌ ಬಳಿ ತರಬೇತಿ ಪಡೆದುಕೊಂಡಿರುವ ಧನುಷಾ ಇದೀಗ ಪುನೀತ್‌ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಧನುಷಾ, ಅದಕ್ಕಾಗಿಯೇ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಪ್ರತಿದಿನ ಸತತ 6 ಗಂಟೆಗಳ ಕಾಲ ಪ್ರಾಕ್ಟೀಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿಭಾವಂತೆಯಾಗಿರುವ ಧನುಷಾ ತಮ್ಮ ಗುರಿಯನ್ನು ಸಾಧಿಸುತ್ತಾರೆ ಎಂಬ ನಂಬಿಕೆ ತರಬೇತುದಾರ ಪುನೀತ್ ಅವರಿಗಿದೆಯಂತೆ.

2013ರಿಂದ 2018ರವರೆಗೆ ಸತತವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ 18ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಧನುಷಾ, 2013-14ರಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ, 2016-17ರಲ್ಲಿ ಪುಣೆಯಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ಕಂಚು, ಮೈಸೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆ ನೀಡುವ ಪ್ರತಿಷ್ಠಿತ 2017-18ನೇ ಸಾಲಿನ ನಂದಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮೈಸೂರು ಅಂತರ ವಿವಿ ಕ್ರೀಡಾಕೂಟ ಪಂದ್ಯಾವಳಿಯಲ್ಲಿ ಹೆಪ್ಟಾಥ್ಲಾನ್‌ ಮತ್ತು ಲಾಂಗ್‌ ಜಂಪ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ 23 ವರ್ಷ ಹಾಗೂ 27 ವರ್ಷದ ರೆಕಾರ್ಡ್‌ ಬ್ರೇಕ್‌ ಮಾಡಿದ್ದಾರೆ.

ರಾಷ್ಟ್ರೀಯ ಜೂನಿಯರ್‌ ಹೆಪ್ಟಾಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಧನುಷಾ, ಮೈಸೂರು ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೋಚ್ ಆಗಿರುವ ಪ್ರಭಾಕರ್ ಹಾಗೂ ಸೊಮಾನಿ ಕಾಲೇಜಿನ ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಆಗಿರುವ ಸದಾಶಿವ ಭಟ್ ಅವರ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯ ಯುನಿವರ್ಸಿಟಿ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿಟ್ಟಿನತ್ತ ಗಮನ ಹರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: