ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ ಜಿಲ್ಲೆಯ ವಿವಿಧೆಡೆ ನ.30ರಿಂದ ಮಕ್ಕಳ ಚಲನಚಿತ್ರೋತ್ಸವ

ಮಂಡ್ಯ (ನ.29): ಮಕ್ಕಳ ಚಲನಚಿತ್ರೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನ.30 ರಿಂದ ಡಿ.12 ರವರೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿರುವ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿ.ಸೂರ್ಯ ಪ್ರಕಾಶ್ ಮೂರ್ತಿ ಅವರು ತಿಳಿಸಿದ್ದಾರೆ.

ಮಕ್ಕಳ ಚಲನ ಚಿತ್ರೋತ್ಸವ ಕಾರ್ಯಕ್ರಮದಲ್ಲಿ ವಿಶೇಷವಾಗಿ 3ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಕ್ಕಳ ಮನಸ್ಥಿತಿ ಪರಿವರ್ತನೆ, ಸಾಮಾಜಿಕ ನೈಜತೆ ಬಗ್ಗೆ ಮನವರಿಕೆ, ಸಕಾರಾತ್ಮಕ ಯೋಜನೆ ಮಾಡುವ ಬಗ್ಗೆ ಮತ್ತು ಸಾಮಾಜಿಕ ಮನೋಭಾವವುಳ್ಳ “ಎಳೆಯರು ನಾವು ಗೆಳೆಯರು” ಎಂಬ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಾಂಡವಪುರ ತಾಲ್ಲೂಕಿನಲ್ಲಿ ಕೋಕಿಲ ಚಿತ್ರಮಂದಿರ, ನಾಗಮಂಗಲ ತಾಲ್ಲೂಕಿನಲ್ಲಿ ವೆಂಕಟೇಶ್ವರ ಚಿತ್ರಮಂದಿರ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಬಸವೇಶ್ವರ ಚಿತ್ರಮಂದಿರ, ಬೆಳ್ಳೂರು ಕ್ರಾಸ್‍ನಲ್ಲಿರುವ ಮಾರುತಿ ಚಿತ್ರಮಂದಿರ, ಅರಕೆರೆಯಲ್ಲಿರುವ ಮಂಜುನಾಥ ಚಿತ್ರಮಂದಿರ, ಗಜಾಂನಲ್ಲಿರುವ ಶ್ರೀದೇವಿ ಚಿತ್ರಮಂದಿರ ಹಾಗೂ ಮಂಡ್ಯದಲ್ಲಿ ಮಹಾವೀರ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ನ.30 ರಂದು ಮಂಡ್ಯದ ಮಹಾವೀರ ಚಿತ್ರಮಂದಿರ ಹಾಗೂ ಇತರೆ ತಾಲ್ಲೂಕುಗಳ ಚಿತ್ರಮಂದಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವರು. 2018-19 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ “ಮಕ್ಕಳ ಚಲನ ಚಿತ್ರೋತ್ಸವ” ಕಾರ್ಯಕ್ರಮದಲ್ಲಿ ಎಲ್ಲಾ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಯ ಮಕ್ಕಳು ಇದರ ಪ್ರಯೋಜನ ಪಡೆಯುವಂತೆ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: