
ಪ್ರಮುಖ ಸುದ್ದಿಮೈಸೂರು
ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕಕ್ಕೆ ಸ್ವಂತ ನಿವೇಶನ ನೀಡಲು ಮುಂದಾದ ಅಭಿಮಾನಿ ‘ಕೆ.ಸಿ.ಪಿ.ರಾಜಣ್ಣ’
ಸ್ವಂತ ನಿವೇಶನ ಸೇರಿದಂತೆ ಜಾಗವನ್ನು ಖರೀದಿಸಿ ಕೊಡುವುದಾಗಿ ಹೇಳಿಕೆ
ಮೈಸೂರು. ನ.28 : ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಹಿನ್ನೆಲೆ ಸರ್ಕಾರ ಮತ್ತು ಕುಟುಂಬದ ನಡುವೆ ನಡೆಯುತ್ತಿರುವ ಶಿಥಲ ಸಮರವನ್ನು ಕಂಡ ವಿಷ್ಣು ಅಭಿಮಾನಿಯೊಬ್ಬ ಸ್ಮಾರಕ ನಿರ್ಮಾಣಕ್ಕೆ ತಮ್ಮ ಸ್ವಂತ ನಿವೇಶನ ನೀಡುವುದಾಗಿ ಘೋಷಿಸಿದ್ದಾರೆ.
ಕೆ.ಆರ್.ಎಸ್ ನಿವಾಸಿಯಾದ ಗುತ್ತಿಗೆದಾರ ಕೆ.ಸಿ.ಪಿ.ರಾಜಣ್ಣ ಎಂಬುವವರು ತಮ್ಮ ಸ್ವಯಾರ್ಜಿತ 100×80 ನಿವೇಶನವನ್ನು ಸ್ಮಾರಕ ನಿರ್ಮಾಣಕ್ಕೆಂದು ನೀಡಲಿದ್ದು ಈ ಬಗ್ಗೆ ಕುಟುಂಬಸ್ಥರು ಸಮ್ಮತಿಸಬೇಕೆಂದು ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆ.ಆರ್.ಎಸ್ ನ ರೈಲ್ವೆನಿಲ್ದಾಣದ ಬಳಿ ತಮ್ಮ ನಿವೇಶನವಿದ್ದು ಅದಕ್ಕೆ ಹೊಂದಿಕೊಂಡಂತೆ 13 ಗುಂಟೆ ಜಾಗವು ಇದೆ. ನನ್ನ ಮನವಿಯನ್ನು ಕುಟುಂಬಸ್ಥರು ಮನ್ನಿಸಿದ್ದೆ ಆದಲ್ಲಿ ಆ 13 ಗುಂಟೆ ಜಾಗವನ್ನು ಖರೀದಿಸಿ ನೀಡಲಾಗುವುದು.
ಇದಲ್ಲದೇ ಅಲ್ಲಿಯೇ ಸರ್ಕಾರಿ ಜಾಗವಿದ್ದು ಅದನ್ನು ಸ್ಮಾರಕಕ್ಕೆ ಬಳಸಿಕೊಳ್ಳವ ಅವಕಾಶವು ಇರಲಿದೆ, ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಹಾಗೂ ಸಂಬಂಧಿಸಿದವರು ಪ್ರತಿಕ್ರಿಯೆ ನೀಡಬೇಕಾಗಿದೆ. ಈ ಅಭಿಮಾನಿಯ ಮನವಿ ಮನ್ನಿಸಬೇಕು.
ಈಗಾಗಲೇ ವಿಷ್ಣುವರ್ಧನ್ ಅವರು ಗತಿಸಿ 9 ವರ್ಷಗಳೇ ಕಳೆದಿದೆ, ಇನ್ನೂ ವಿಳಂಬವಾಗದೇ ಶೀಘ್ರದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂದು ಕೋರಿದರು.
ಹುಚ್ಚು ಅಭಿಮಾನವೆನ್ನುವುದೇ ಹೀಗೆ, ತನ್ನ ಆರಾಧ್ಯ ದೈವಕ್ಕಾಗಿ ಏನೆಲ್ಲ ತ್ಯಾಗಕ್ಕೂ ತಯಾರಿರುತ್ತಾರೆ ಎನ್ನುವುದಕ್ಕೆ ಇವರೊಬ್ಬ ನಿದರ್ಶನ ಪ್ರಾಯರು ( ವರದಿ : ಕೆ.ಎಂ.ಆರ್)