ಪ್ರಮುಖ ಸುದ್ದಿ

ಮಧ್ಯವರ್ತಿಗಳನ್ನು ಪೊಲೀಸರ ವಶಕ್ಕೆ ನೀಡಿದ ಜಿಲ್ಲಾಧಿಕಾರಿ : ಇಬ್ಬರು ಕಂಪ್ಯೂಟರ್ ಆಪರೇಟರ್ ಅಮಾನತಿಗೆ ಆದೇಶ

ರಾಜ್ಯ(ಬೆಂಗಳೂರು)ನ.29:-  ರಾಜಾಜಿನಗರ ಉಪ ತಹಶೀಲ್ದಾರ್ ಅವರ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ ಶಂಕರ್ ಅವರು ಇಬ್ಬರು ಮಧ್ಯವರ್ತಿಗಳನ್ನು ಪತ್ತೆ ಹಚ್ಚಿದ್ದು ಪೊಲೀಸರ ವಶಕ್ಕೆ ನೀಡಿರುವುದಲ್ಲದೇ ಇವರಿಗೆ ಸಹಕರಿಸುತ್ತಿದ್ದ ಇಬ್ಬರು ಕಂಪ್ಯೂಟರ್ ಆಪರೇಟರ್ ಗಳನ್ನು ಸಂಸ್ಪೆಡ್ ಮಾಡುವಂತೆ ಆದೇಶಿಸಿದ್ದಾರೆ.

ಮಧ್ಯಾಹ್ನ 12 ಗಂಟೆಯ ವೇಳೆಗೆ ರಾಜಾಜಿನಗರ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ ಶಂಕರ್ ಅವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಅವರು ದಳ್ಳಾಳಿಗಳು ಎಂಬುದು ಪತ್ತೆಯಾಯಿತು. ಇದೇ ವೇಳೆ ನಾಡ ಕಚೇರಿಯಲ್ಲಿದ್ದ ಹಲವು ನಾಗರೀಕರು ಜಿಲ್ಲಾಧಿಕಾರಿಗಳ ಮುಂದೆ ದಳ್ಳಾಳಿಗಳ ವಿರುದ್ಧ ದೂರು ಸಲ್ಲಿಸಿದರು. ಅವರನ್ನು ಸ್ಥಳದಲ್ಲೇ ವಿಚಾರಣೆಗೆ ಒಳಪಡಿಸಿದಾಗ ಕೆಲ ಜನರ ಕೆಲಸಗಳನ್ನು ಮಾಡಿಸಿಕೊಡಲು ಬಂದಿರುವುದಾಗಿ ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿಕೊಂಡರು. ತಕ್ಷಣವೇ ಪೊಲೀಸರಿಗೆ ಇವರಿಬ್ಬರ ವಿರುದ್ಧ ದೂರು ಸಲ್ಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಸೂಚನೆ ನೀಡಿದರು.

ಉಲ್ಲಾಳ ಮುಖ್ಯ ರಸ್ತೆಯ ಎಚ್.ಕೆ. ರಾಜಣ್ಣ, ಮತ್ತು  ಪ್ರಕಾಶ್ ನಗರರದ ಹನುಮಂತಪ್ಪ ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತಮ್ಮ ವಶಕ್ಕೆ ಪಡೆದಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ನಾಡ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಸಿಬ್ಬಂದಿಗಳು ಈ ದಳ್ಳಾಳಿಗಳಿಗೆ ಸಹಕರಿಸುತ್ತಿದ್ದರು ಎಂಬ ಆರೋಪದಡಿ ಇವರಿಬ್ಬರನ್ನು ತಕ್ಷಣವೇ ಸಂಸ್ಪೆಡ್ ಮಾಡಬೇಕೆಂದು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಕಂಪ್ಯೂಟರ್ ಆಪರೇಟರ್ ಅವರ ಜಾಗದಲ್ಲಿ ಹೊಸ ಕಂಪ್ಯೂಟರ್ ಆಪರೇಟರ್ ನ್ನು ನೇಮಕ ಮಾಡಿಕೊಳ್ಳುವಂತೆಯೂ ಸೂಚನೆ ನೀಡಿದರು.

ನಾಡ ಕಚೇರಿ ಆವರಣದಲ್ಲಿ ದಳ್ಳಾಳಿಗಳು ಅಡ್ಡಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಉಪ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ವಿಜಯ ಭಾಸ್ಕರ್ ಅವರು ಮುಂದೆ ಇಂತಹ ವರ್ತನೆ ಮರುಕಳಿಸಿದರೇ ಶಿಸ್ತು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: