ಪ್ರಮುಖ ಸುದ್ದಿ

ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಹಣ್ಣು-ಹಂಪಲು ವಿತರಣೆ

ರಾಜ್ಯ(ಮಂಡ್ಯ)ನ.29:- ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳಿನಲ್ಲಿ ಮುಸಲ್ಮಾನ್ ಬಾಂಧವರು ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು. ಸಂಜೆ ಪೈಗಂಬರ್ ಅವರ ಜೀವನ ಸಾಧನೆಯನ್ನು ಸಾರುವ ಪ್ರವಚನ ಕಾರ್ಯಕ್ರಮವನ್ನು ನಡೆಸಿ ಸಾರ್ವಜನಿಕರಿಗೆ ಪ್ರವಾದಿ ಮಹಮದ್ ಅವರು ಹೊಂದಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಅರಿವು ಮೂಡಿಸಿದರು.

ಮೈಸೂರಿನ ಕನ್ನಡ ಉಪನ್ಯಾಸಕ ನಯಾಜ್ ಮಾತನಾಡಿ ಪೈಗಂಬರ್ ಅವರನ್ನು ಕುರಿತು ಪ್ರಧಾನ ಉಪನ್ಯಾಸ ನೀಡಿ ಪೈಗಂಬರ್ ಅವರು ಬಡವರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ಹಿಂಸೆಯನ್ನು ವಿರೋಧಿಸುತ್ತಿದ್ದರು. ಅಹಿಂಸಾ ಮಾರ್ಗದ ಮೂಲಕ ಧರ್ಮವನ್ನು ಪ್ರಚಾರ ಮಾಡುತ್ತಾ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಧರ್ಮವನ್ನು ಬೆಳೆಸುವಲ್ಲಿ ಅಪಾರವಾಗಿ ಶ್ರಮಿಸಿದರು. ಹಣ್ಣು ಮಾರುವ ವೃತ್ತಿ ಮಾಡುತ್ತಿದ್ದ ಪೈಗಂಬರ್ ಅವರು ಉತ್ತಮವಾದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಹಣ್ಣು ಕೆಟ್ಟು ಹೋಗಿದೆ ಎಂದು ಬಂದವರಿಗೆ ಬದಲಿ ಹಣ್ಣು ನೀಡುತ್ತಿದ್ದರು. ಅವರ ಹಣವನ್ನು ವಾಪಸ್ ನೀಡುವ ಮೂಲಕ ಅಪಾರವಾಗಿ ಜನರ ವಿಶ್ವಾಸ ಗಳಿಸಿದ್ದರು. ಇದರಿಂದ ಇವರ ಬಗ್ಗೆ ಜನರಲ್ಲಿ ಅಪಾರ ನಂಬಿಕೆ ಬೆಳೆಯುತ್ತಾ ಹೋಯಿತು. ಇದು ಧರ್ಮದ ಬೆಳೆವಣೆಗೆಗೆ ಪ್ರಮುಖ ಕಾರಣವಾಯಿತು. ಹಜರತ್ ಪ್ರವಾದಿ ಮಹಮ್ಮದ್ ಅವರ ತತ್ವ ಆದರ್ಶ ಗುಣಗಳನ್ನು ಬಡವರ ಬಗ್ಗೆ ಹೊಂದಿದ್ದ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ನಯಾಜ್ ಮನವಿ ಮಾಡಿದರು.

ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಸಲ್ಮಾನ್ ಬಾಂಧವರಿಗೆ ಪೈಗಂಬರ್ ಜನ್ಮ ದಿನದ ಶುಭಾಶಯ ಕೋರಿ, ಅಕ್ಕಿಹೆಬ್ಬಾಳು ಜಾಮಿಯಾ ಮಸೀದಿ ಕಮಿಟಿಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುಂತೆ 5ಲಕ್ಷ ರೂಗಳನ್ನು ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಅಕ್ಕಿಹೆಬ್ಬಾಳು ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಸಯೀಕ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ, ಉಪಾಧ್ಯಕ್ಷ ಎ.ಜೆ.ಕುಮಾರ್, ಕಮಿಟಿಯ ಗೌರವಾಧ್ಯಕ್ಷ ಯೂಸೂಫ್ ಜಿದ್ದಾ, ಉಪಾಧ್ಯಕ್ಷ ಅಬ್ದುಲ್ ಉಬೇದ್, ಕಾರ್ಯದರ್ಶಿ ಕಮಾಲ್ ಷರೀಫ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: