ಕರ್ನಾಟಕಪ್ರಮುಖ ಸುದ್ದಿ

ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು: ಮಾಜಿ ಡಿಸಿಎಂ ಆರ್.ಅಶೋಕ್

ಬೆಂಗಳೂರು (ನ.29): ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅಂಥವರೇ ಇಂದು ಪರಸ್ಪರ ಕೈ ಜೋಡಿಸುತ್ತಾರೆಂದರೆ ರಾಜಕಾರಣದಲ್ಲಿ ಅಸಾಧ್ಯ ಎಂಬುದು ಇಲ್ಲವೇ ಇಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಅವರು, “ದೇವೇಗೌಡರು, ಸಿದ್ದರಾಮಯ್ಯನವರು ಪುನಃ ಒಂದಾಗುತ್ತಾರೆ ಎಂಬುದು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ. ಹಾವು ಮುಂಗೂಸಿಯಂತಿದ್ದವರೇ ಒಂದಾಗಿರುವಾಗ ಇನ್ನು ನಮ್ಮ ಪಕ್ಷಕ್ಕೆ ಅನ್ಯ ಪಕ್ಷಗಳಿಂದ ಬರುವುದಿಲ್ಲ ಎಂಬುದಕ್ಕೆ ಆಗುತ್ತದೆಯೇ?” ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬುದು ಜನರಿಗೆ ಗೊಂದಲವಾಗಿದೆ. ಇಲ್ಲಿ ಮುಖ್ಯಮಂತ್ರಿ ಯಾರು ಎಂಬುದೇ ತಿಳಿಯುತ್ತಿಲ್ಲ. ಸಚಿವರು ಎಲ್ಲಿ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ದೇವರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು. 38 ಶಾಸಕರನ್ನು ಇಟ್ಟುಕೊಂಡವರು ಇಂದು ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. 2ನೇ ಸ್ಥಾನದಲ್ಲಿರುವವರು ದೈನೇಸಿ ಸ್ಥಿತಿಗೆ ಬಂದಿದ್ದಾರೆ. ಅತಿ ಹೆಚ್ಚು ಸ್ಥಾನ ಗೆದ್ದಿರುವವರು ವಿರೋಧ ಪಕ್ಷದಲ್ಲಿದ್ದಾರೆ. ಇದು ಪ್ರಜಾಪ್ರಭತ್ವ ವ್ಯವಸ್ಥೆಯ ದುರಂತವೋ, ಅಣಕವೋ ಗೊತ್ತಿಲ್ಲ ಎಂದು ಕುಹಕವಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಹತಾಶೆ ಕಾಡುತ್ತಿದೆ. ಹೀಗಾಗಿ ಅವರು ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಾರೆ. ರೈತರು, ಮಹಿಳೆಯರನ್ನು ಅಪಮಾನಕ್ಕೀಡು ಮಾಡಿ ಈಗ ಮಾಧ್ಯಮದವರ ಮೇಲೂ ಮುಗಿಬಿದ್ದಿದ್ದಾರೆ ಎಂದರು.

ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ನಾನು ಪತ್ರಿಕಾಗೋಷ್ಠಿಯನ್ನೇ ನಡೆಸುವುದಿಲ್ಲ, ಬೇಕಾದರೆ ಬರೆದುಕೊಳ್ಳಿ ಎಂದು ಉಡಾಫೆಯ ಮಾತನಾಡುತ್ತಿದ್ದಾರೆ. ಅಧಿಕಾರ ನಡೆಸಲು ಕುಮಾರಸ್ವಾಮಿಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಶೋಕ್ ಟೀಕಿಸಿದರು. ನೀವು ಮುಖ್ಯಮಂತ್ರಿಯಾದವರು. ಉನ್ನತ ಸ್ಥಾನದಲ್ಲಿದ್ದೀರಿ. ನಿಮಗೆ ಶಾಂತಿ, ಸಂಯಮ, ಸಹನೆ ಇರಬೇಕು. ಜನರು ಕಷ್ಟ ಎಂದು ಬಂದಾಗ ಅದನ್ನು ಆಲಿಸಿ ಪರಿಹರಿಸುವುದು ನಿಮ್ಮ ಜವಾಬ್ದಾರಿ ಎಂದರು. (ಎನ್.ಬಿ)

Leave a Reply

comments

Related Articles

error: