ಪ್ರಮುಖ ಸುದ್ದಿಮೈಸೂರು

ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಿದ ಏಕೈಕ ನಾಯಕ : ಸಂಸದ ಧ್ರುವ ನಾರಾಯಣ ಬಣ್ಣನೆ

ಎಚ್.ಎಸ್. ಮಹದೇವ್ ಪ್ರಸಾದ್ ಅವರು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ ಎಂದು ಸಂಸದ ಧ್ರುವನಾರಾಯಣ್ ಬಣ್ಣಿಸಿದರು.

ಮೈಸೂರಿನ ಪುರಭವನದಲ್ಲಿ ನಡೆದ  ಹೆಚ್.ಎಸ್. ಮಹದೇವಪ್ರಸಾದ್ ಅವರ ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಧ್ರುವನಾರಾಯಣ ಅವರು, ಹೆಚ್.ಎಸ್. ಮಹದೇವ್ ಪ್ರಸಾದರ ಅಕಾಲಿಕ ಮರಣದಿಂದ ಪಕ್ಷಕ್ಕೆ ಹಾಗೂ ನನಗೆ ವೈಯಕ್ತಿಕವಾಗಿ ನಷ್ಟವಾಗಿದೆ ಎಂದರು. ನಾನು ಅವರು 2೦ ವರ್ಷದ ಸ್ನೇಹಿತರು. ಅವರು ದೇವರಾಜ ಅರಸ್ ಅವರ ಗರಡಿಯಲ್ಲಿ ಬೆಳೆದವರು. ವಿದ್ಯಾರ್ಥಿ ದೆಸೆಯಲ್ಲಿ ಮುಖಂಡರಾಗಿ ಕೆಲಸ ಮಾಡಿದವರು. ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಶೆಟ್ಟರ ಮಗನಾಗಿದ್ದ ಅವರು ತಂದೆಯಂತೆ ಹೋರಾಟ ಮಾಡಿ, ಅವರ ಆದರ್ಶಗಳನ್ನು ಪಾಲಿಸಿದ್ದಾರೆ ಎಂದರು.

ಸತತ 5 ಬಾರಿ ಸೋಲಿಲ್ಲದ ಸರದಾರನಾಗಿ ಜಯಗಳಿಸಿ ಇವತ್ತು ಚಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿದ್ದಾರೆ.  ಅವರು ಚಾಮರಾಜನಗರ ಕ್ಷೇತ್ರಕ್ಕೆ ಯಾವುದೇ ಕೊರತೆ ಮಾಡಲಿಲ್ಲ. ಅವರು ಜನತಾ ಪರಿವಾರದಲ್ಲಿ ಇದ್ದಾಗಲೇ ಕಾಂಗ್ರೆಸ್ ನವರನ್ನೂ ಕಡೆಗಣಿಸುತ್ತಿರಲಿಲ್ಲ. ಎಲ್ಲ ರೀತಿಯ ಸೌಕರ್ಯವನ್ನು ಅಂದೇ ಒದಗಿಸಿ ಮಾದರಿ ನಾಯಕ ಎನಿಸಿಕೊಂಡಿದ್ದರು ಎಂದರು. ಚಾಮರಾಜನಗರ ಜಿಲ್ಲೆಗೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಪ್ರತ್ಯೇಕ ಹಾಲು ಒಕ್ಕೂಟ ರಚನೆ ಮಾಡಿದರು. ಕೆರೆಗಳಿಗೆ ನೀರು ತುಂಬಿಸಿದ ಜಿಲ್ಲೆಯ ಏಕೈಕ ನಾಯಕ ಎಂದು ವರ್ಣಿಸಿದರು. ನಾನೂ ಸೇರಿದಂತೆ ನಾಲ್ಕು ಶಾಸಕರು ಅವರನ್ನು ಕ್ಯಾಪ್ಟನ್ ಎಂದೇ ಕರೆಯುತ್ತಿದ್ದೆವು. ಪಕ್ಷ ಕಟ್ಟಿದ ಧೀಮಂತ ಹಾಗೂ ಉತ್ತಮ ಆಡಳಿತ ನಡೆಸುವ ನಾಯಕ ಎಂದರೆ ಮಹದೇವ ಪ್ರಸಾದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ತಿಳಿಸಿದರು.

ಸಚಿವ ತನ್ವೀರ್ ಸೇಠ್ ಮಾತನಾಡಿ, ಪ್ರತಿಯೊಬ್ಬರ ಎದೆಯಾಳದಲ್ಲಿ ಹೆಚ್.ಎಸ್. ಮಹದೇವ ಪ್ರಸಾದ್ ನೆಲೆ ನಿಂತಿದ್ದಾರೆ. ಅವರು ಮಾಡಿರುವ ಕಾರ್ಯವೇ ಇದಕ್ಕೆ ಸಾಕ್ಷಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.

ಹೆಚ್.ಎಸ್. ಮಹದೇವಪ್ರಸಾದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್ ನ ಶಾಸಕರಾದ ವಾಸು, ಮಂಜುನಾಥ್, ಜಿ.ಪಂ. ಸದಸ್ಯೆ ಪುಷ್ಪ ಅಮರನಾಥ್, ಶಿವಣ್ಣ, ಜಿಲ್ಲಾ ಅಧ್ಯಕ್ಷ, ವಿಜಯಕುಮಾರ್, ನಗರ ಅಧ್ಯಕ್ಷ ರವಿಶಂಕರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: