
ಮೈಸೂರು
ಮೈಕ್ರೊಗ್ರಿಡ್ ಆ್ಯಂಡ್ ಮೊಬಿಲಿಟಿ ಕುರಿತು ಉಪನ್ಯಾಸ
ಮೈಸೂರಿನ ಎನ್.ಐ.ಇ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣದಲ್ಲಿನ ಗುಣಮಟ್ಟದ ಅಭಿವೃದ್ಧಿ ಕುರಿತಂತೆ ಗುರುವಾರ ಮೈಕ್ರೊಗ್ರಿಡ್ ಆ್ಯಂಡ್ ಮೊಬಿಲಿಟಿ ವಿಷಯದ ಮೇಲೆ ಒಂದು ದಿನದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಮಾನಂದವಾಡಿ ರಸ್ತೆಯಲ್ಲಿರುವ ಎನ್.ಐ.ಇ ಕಾಲೇಜಿನ ಡಾ.ರಾಧಾಕೃಷ್ಣ ಸೆಮಿನಾರ್ ಹಾಲ್ ನಲ್ಲಿ ಗುರುವಾರ ಏರ್ಪಡಿಸಲಾದ ಉಪನ್ಯಾಸ ಕಾರ್ಯಕ್ರಮವನ್ನು ಯು.ಎಸ್.ಎ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದ ಇಲೆಕ್ಟ್ರಿಕಲ್ ಆ್ಯಂಡ್ ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಡಾ.ಗಿರಿವೆಂಕಟರಮಣ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿದೆ. ಸ್ವಚ್ಛತೆ ಎಂದರೆ ಕೇವಲ ಮೈದಾನವನ್ನಷ್ಟೇ ಸ್ವಚ್ಛವಾಗಿರಿಸಿಕೊಳ್ಳುವುದಲ್ಲ. ಬದಲಾಗಿ ನಾವು ಉಸಿರಾಡುವ ಗಾಳಿಯೂ ಶುದ್ಧವಾಗಿರಬೇಕು ಎಂದರು.
ಸೋಲಾರ್ ಉತ್ಪನ್ನಗಳನ್ನೇ ಪ್ರೋತ್ಸಾಹಿಸಬೇಕು. ಮೈಕ್ರೊಗ್ರಿಡ್ ಕುರಿತು ಸಂಶೋಧನೆಗಳಾಗುವಂತೆ ಹೆಚ್ಚು ಪ್ರೋತ್ಸಾಹಿಸಬೇಕು. ಸೋಲಾರ್ ಶಕ್ತಿಯನ್ನು ಉಪಯೋಗಿಸಲು ಪ್ರೇರೇಪಿಸಬೇಕು. ಇದರಿಂದ ಮಾಲಿನ್ಯವನ್ನೂ ನಿಯಂತ್ರಿಸಬಹುದು. ಲಾಭವೂ ಇದೆ ಎಂದು ತಿಳಿಸಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಲ್.ಶೇಖರ್, ಪ್ರೊ. ಡಾ.ಎಂ.ವಿ.ಅಚ್ಚುತ ಮತ್ತಿತರರು ಉಪಸ್ಥಿತರಿದ್ದರು.