ಕರ್ನಾಟಕ

ಬೆಂಗಳೂರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ: ನಾಲ್ವರ ಬಂಧನ

ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿ ಸೇರಿ ನಾಲ್ಕು ಮಂದಿಯನ್ನು ಗುರುವಾರ ಬಂಧಿಸಿದ್ದಾರೆ.

ಹೊಸ ವರ್ಷಾಚರಣೆಯ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ನಡುರಸ್ತೆಯಲ್ಲಿ ಎಳೆದಾಡಿ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಂಗಳೂರು ಮಾತ್ರವಲ್ಲ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಲಿನೋ, ಅಯ್ಯಪ್ಪ, ರಾಜು ಮತ್ತು ಚಿನ್ನು ಬಂಧಿತರಾಗಿದ್ದು, ಲಿನೋ ಮತ್ತು ಅಯ್ಯಪ್ಪ ಪ್ರಮುಖ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಕಮ್ಮನಹಳ್ಳಿಯ ಫ್ರೇಜರ್ ಟೌನ್ ನಿವಾಸಿಗಳು ಎನ್ನಲಾಗಿದೆ. ಸಂತ್ರಸ್ತ ಯುವತಿಯ ಮನೆಯ ಬಳಿಯಿರುವ ಪ್ರಶಾಂತ್ ಫ್ರಾನ್ಸಿಸ್ ಎಂಬುವವರ ಮನೆಯ ಮುಂದೆ ಈ ಪ್ರಕರಣ ನಡೆದಿದ್ದು, ಫ್ರಾನ್ಸಿಸ್ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದರು.

ಆರೋಪಿಗಳಲ್ಲಿ ಒಬ್ಬ ಗೂಡ್ಸ್ ವ್ಯಾನ್ ಚಾಲಕನಾಗಿದ್ದು, ಇನ್ನಿಬ್ಬರು ಕೊರಿಯರ್ ಡೆಲಿವರಿ ಬಾಯ್ ಗಳಾಗಿದ್ದಾರೆ. ಲಿನೋ ಬಿಕಾಮ್ ವಿದ್ಯಾರ್ಥಿಯಾಗಿದ್ದಾನೆ ಎನ್ನಲಾಗಿದೆ.

Leave a Reply

comments

Related Articles

error: