ಪ್ರಮುಖ ಸುದ್ದಿ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನ ದೊಡ್ಡಿ ಗ್ರಾಮದ ಕುರಿಗಾಹಿ ಕಾಮೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯ(ಮಂಡ್ಯ)ನ.30:- ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನ ದೊಡ್ಡಿ ಗ್ರಾಮದ ಕುರಿಗಾಹಿಯಾಗಿರುವ 82 ವರ್ಷ ಪ್ರಾಯದ ಕಾಮೇಗೌಡ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕಾಮೇಗೌಡರು ತಮ್ಮ ನಲವತ್ತು ವರ್ಷಗಳ ಬದುಕಿನಲ್ಲಿ ಸುಮಾರು 14 ಕೆರೆಗಳನ್ನು ತಮ್ಮ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪಡೆದ 63 ಮಂದಿಯಲ್ಲಿ ಕಾಮೇಗೌಡರು ಒಬ್ಬರಾಗಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಾಮೇಗೌಡರಿಗೆ ಜುಲೈ 15ರಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮೊದಲ ಬಾರಿಗೆ ಅವರ ಸಾಧನೆಯನ್ನು ಗುರುತಿಸಿ ವರದಿ ಪ್ರಕಟಿಸಿತ್ತು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಕಾಮೇಗೌಡ ಅವರ ಮನೆಗೆ ಭೇಟಿ ನೀಡಿದಾಗ ಅವರು ತಮ್ಮ ಮನೆಯ ಹಸುವಿನ ಕೊಟ್ಟಿಗೆಯಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದರು. ತಮ್ಮ ಕುಟುಂಬ ಸದಸ್ಯರು ಕೆರೆಗಳಿಗಾಗಿ ಹಣ ಖರ್ಚು ಮಾಡುವುದನ್ನು ನಿಲ್ಲಿಸಿ, ಅದೇ ಹಣವನ್ನು ಮನೆ ಖರ್ಚಿಗೆ ನೀಡಬೇಕೆಂದು ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ, ತಮಗೆ ಬಂದ ಎಲ್ಲಾ ಪ್ರಶಸ್ತಿಗಳ ಹಣವನ್ನು ಕೆರೆಗಳಿಗಾಗಿಯೇ ಕಾಮೇಗೌಡ ಖರ್ಚು ಮಾಡಿದ್ದಾರೆ.

ಯಾವುದೇ ಶಿಕ್ಷಣ ಪಡೆಯದ  ಕಾಮೇಗೌಡರು ತಮ್ಮ ಗ್ರಾಮದಲ್ಲಿ 14 ಕೆರೆಗಳನ್ನು ಸ್ಥಾಪಿಸಿ ತಮ್ಮ ಜಿಲ್ಲೆಯಲ್ಲಿ ಕಡು ಬೇಸಿಗೆಯ ಕಾಲದಲ್ಲಿ ಕೆರೆಯಲ್ಲಿ ನೀರು ತುಂಬಿರುವಂತೆ ಮಾಡಲು ಕಾರಣಕರ್ತರಾಗಿದ್ದರು. ನಾವು ನೀರನ್ನು ಹಣ ಕೊಟ್ಟು ಖರೀದಿಸಿ ಬಳಸುತ್ತೇವೆ. ಆದರೆ ಪ್ರಾಣಿ ಪಕ್ಷಿಗಳು ನೀರನ್ನು ಹೇಗೆ ಪಡೆಯಬೇಕು ಎಂದು ಪ್ರಶ್ನಿಸಿದ ಕಾಮೇಗೌಡರು ಇದು ನಮ್ಮ ತಾಯಿಗೆ ನಾವು ಮಾಡುವ ಸೇವೆ ಎಂದು ಹೇಳುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ ಅಂಗವಾಗಿ ಸರ್ಕಾರ 1 ಲಕ್ಷ ರೂಪಾಯಿ ಗೌರವವನ್ನು ನೀಡಲಿದೆ. ಈ “ಹಣವನ್ನು ಕೆರೆ ಗಳಿಗಾಗಿ” ಮತ್ತು ತಮ್ಮ ಮನೆಯನ್ನು ರಿಪೇರಿ ಮಾಡಿಸುವುದಕ್ಕೆ ಎಂದು ಕಾಮೇಗೌಡ ಹೇಳಿದ್ದಾರೆ, ನಾನು ಬದುಕಿರುವವರೆಗೂ  ಕೆರೆಗಳ ಬಗ್ಗೆಯೇ ಚಿಂತಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: