ಮೈಸೂರು

ಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಶತಮಾನೋತ್ಸವ; ಜ.8ಕ್ಕೆ

ಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ಶತಮಾನೋತ್ಸವದ ಅಂಗವಾಗಿ ಮೈಸೂರು ಲಯನ್ಸ್ 317-ಎ ಪ್ರಾಂತ್ಯ 11ರ ಪ್ರಾಂತೀಯ ಉತ್ಸವ “ವಿಜಯದೊಂದಿಗೆ ಸೇವೆ” ಘೋಷಣಾ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಪ್ರಾಂತೀಯ ಅಧ್ಯಕ್ಷ ಕೆ.ಎಸ್. ವಿರೂಪಾಕ್ಷ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.8ರ ಭಾನುವಾರ ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಬೆಳಿಗ್ಗೆ 9:30ಕ್ಕೆ ವಿಜಯಸೇವೆ ಆರಂಭವಾಗಲಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಆಗಮಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ‘ವಿಜಯದೊಂದಿಗೆ ಸೇವೆ’ ವಿಷಯವಾಗಿ ಮಾತನಾಡುವರು ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೈಸೂರಿನ ಸರ್ಕಾರಿ ಆಯುರ್ವೇದ ಪಂಚಕರ್ಮ ಆಸ್ಪತ್ರೆಯ ಹಿರಿಯ ವೈದ್ಯ ಡಾ.ನಾಗೇಶ್ ಮತ್ತು ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಬಸವಣ್ಣಪ್ಪಗೌಡ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಕೆ.ಎಸ್.ವಿರುಪಾಕ್ಷ ಅವರು ಅಧ್ಯಕ್ಷತೆ ವಹಿಸುವರು ಎಂದರು.

ಕಾರ್ಯಕ್ರಮ ನಿಮಿತ್ತ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಲ್ಲದೆ, ಸಂಸ್ಥೆಯಿಂದ ಇಸ್ಕಾನ್ ಅಕ್ಷಯ ಪಾತ್ರಾ ಫೌಂಡೇಶನ್‍ಗೆ ಮತ್ತು ಬೇಬಿ ಮಠಕ್ಕೆ ವಂತಿಗೆ ನೀಡಲಾಗುವುದು. ರಸ್ತೆ ಬದಿ ವ್ಯಾಪಾರಸ್ಥರಿಗೆ ನೆರಳಾಗುವ ಛತ್ರಿಗಳನ್ನು ನೀಡಲಾಗುತ್ತಿದ್ದು ಒಂಟಿಕೊಪ್ಪಲು, ಚಿಕ್ಕಗಡಿಯಾರ ಕಂಬ ಸೇರಿದಂತೆ ಹಲವಾರು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಜೆ.ಪಿ. ನಗರದ ಭವಾನಿ ಸರ್ಕಾರಿ ಶಾಲೆಗೆ ಡೆಸ್ಕ್ ಮತ್ತು ಕುರ್ಚಿ ನೀಡಲಾಗುವುದು. ಇದರೊಟ್ಟಿಗೆ ಆರ್ಥಿಕ ದುರ್ಬಲ ಮಹಿಳೆಯರಿಗೆ ಉಚಿತವಾಗಿ 7 ಹೊಲಿಗೆ ಯಂತ್ರಗಳನ್ನು ನೀಡಿ ಸ್ತ್ರೀ ಸಬಲತೆಗೆ ಪ್ರೋತ್ಸಾಹಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂತೀಯ ಸಂಚಾಲಕ ಆರ್.ಕೃಷ್ಣೋಜೀರಾವ್, ವಲಯ ಅಧ್ಯಕ್ಷ ಶಿವಕುಮಾರ್, ಡಾ.ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: